ಭಾರತೀಯ ಮೂಲನಿವಾಸಿಗಳ ಹೊಸ ವರುಷ ಹರುಷ

ಭಾರತದ ಮೂಲ ನಿವಾಸಿಗಳ ಹೊಸ ವರುಷ ಬಂದಿದೆ. ಇದನ್ನು ಕೆಲವರು ಯುಗಾದಿ ಎಂದು ಹೇಳಿದರೂ ಅದನ್ನು ಆಚರಿಸುವವರು ಯಾರೂ ಹಾಗೆ ಹೇಳುವುದಿಲ್ಲ. ತುಳುವರು ಬಿಸು, ಅಸ್ಸಾಮಿಯರು ಬಿಹು, ತಮಿಳರು ಪುತ್ತಾಂಡು, ಮಲಯಾಳಿಗಳು ವಿಶು, ಪಂಜಾಬಿಗಳು ಬೈಶಾಕಿ ಹೀಗೆ ಈ ಭಾರತೀಯ ಮೂಲ ನಿವಾಸಿಗಳ ಯುಗಾದಿಯನ್ನು ಆಯಾ ಜನಾಂಗದವರು ನಾನಾ ನಾಮದಿಂ ಕರೆದು ಆಚರಿಸುತ್ತಾರೆ.
ತುಳುವರಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವ ಇಲ್ಲವಾದರೂ ಪಾಯಸದೂಟ ಮಾಡುತ್ತಾರೆ. ಪಾಯಸಕ್ಕೆ ಹೊಸ ಗೋಡಂಬಿ ಬೀಜ ಹಾಕುವುದೊಂದು ಸಂಪ್ರದಾಯ. ಮಧ್ಯ ಅಮೆರಿಕಾ ಮೂಲದ ಗೋಡಂಬಿ ಪೋರ್ಚುಗೀಸರಿಂದ ಗೋವಾಕ್ಕೆ ಬಂದು ತುಳುನಾಡಿಗೆ ಬಂತು. ನೂರಯಿವತ್ತು ವರುಷಗಳಿಂದ ಇಲ್ಲೆಲ್ಲ ಬೆಳೆಯತೊಡಗಿದ್ದಾರೆ. ಹಾಗಾದರೆ ಈ ಹೊಸ ಬೀಜದ ಪಾಯಸದ ಸಂಪ್ರದಾಯ ನೂರು ವರುಷದ್ದಿರಬಹುದು. ಭಾರತದ ಎಷ್ಟೋ ವಿಷಯಗಳನ್ನು ಸನಾತನ ಎನ್ನುವ ಬದಲು ಒಂದಷ್ಟು ವಿಶ್ಲೇಷಿಸುವ ಗುಣವನ್ನು ನಾವು ಹೊಂದಿರಬೇಕು. ಆಗ ಮಾತ್ರ ದಿಟ ಗೋಚರವಾಗುತ್ತದೆ.


ಸಾಕಷ್ಟು ತುಳುವರು ಬಿಸು ಮತ್ತು ಮಲಯಾಳಿಗರು ವಿಶುವಿಗೆ ಕನಿ ಇಡುವ ಅಭ್ಯಾಸ ಹೊಂದಿದ್ದಾರೆÉ. ಇದು ಬಿಸು ಬಸಂತ ಕಾಲದ ಹಬ್ಬವಾದ್ದರಿಂದ ಹೊಸ ಫಲಗಳು ಸಾಕಷ್ಟು ಸಿಗುತ್ತವೆ. ಅದಕ್ಕೆ ಗೌರವ ನೀಡುವ ಒಂದು ಆಚಾರ ಅಷ್ಟೆ ಇದು. ಇದನ್ನು ಕೆಲವರು ಕಣಿ ಕೇಳುವುದು ಎಂದು ಅರ್ಥ ಕೆಡಿಸಿದ್ದಾರೆ. ಕನಿ ಎಂದರೆ ದ್ರಾವಿಡ ಭಾಷೆಯಲ್ಲಿ ಸಿಹಿ ಫಲ, ಫಲ ವಸ್ತು ಎಂದಿತ್ಯಾದಿ ಅರ್ಥವಿದೆ. ಕನಿಮೊಳಿ ಎಂಬ ಸಂಸದೆಯಿದ್ದಾರೆ. ಅವರ ಹೆಸರಿನ ಅರ್ಥ ಸಿಹಿಮಾತಿನವಳು ಎಂದು. ದ್ರಾವಿಡ ಭಾಷೆಯ ಈ ನುಡಿಯು ತುಳುವರ ಕನಿ ಇಡುವುದರಲ್ಲಿ ಇದ್ದರೂ ಅದು ಕಣಿಯಾಗಿ ಅದರ ಮೂಲ ಉದ್ದೇಶ ಕಣಿಗೆ ಬಿದ್ದಿದೆ.


ಬಿಸು ಎಂಬುದು ಬಸಂತ ಆಗಿ ವಸಂತ ನುಡಿಯ ವಸಂತ ಕಾಲಕ್ಕೆ ದಾರಿ ಮಾಡಿದೆ. ಹಾಗೆಯೇ ಪಂಜಾಬಿ, ಸಿಕ್ಕಿಂ ಮೊದಲಾದ ಜನರ ಬೈಶಾಕಿಯು ವೈಶಾಖ ಶಬ್ದಕ್ಕೆ ದಾರಿ ಮಾಡಿದೆ. ಈ ಬಾರಿ ತಮಿಳುನಾಡಿನಲ್ಲಿ ಒಂದು ದಿನ ಮೊದಲೆ ಪುತ್ತಾಂಡು ಆಚರಣೆ ಮಾಡಿದರು. ಸಾಮಾನ್ಯವಾಗಿ ಹಿಂದೆಲ್ಲ ಮಕರ ಸಂಕ್ರಾಂತಿ ಜನವರಿ 14ಕ್ಕೆ ಮತ್ತು ಬಿಸು ಏಪ್ರಿಲ್ 14ಕ್ಕೆ ಬರುತ್ತಿತ್ತು. ರಾಷ್ಟ್ರೀಯ ಕ್ಯಾಲೆಂಡರ್ ಬಂದ ಬಳಿಕ ಇದೆಲ್ಲ ಸ್ವಲ್ಪ ಅತ್ತಿತ್ತಾಗಿದೆ. ಕೆಲವರ ಪ್ರಕಾರ ಈಗ ಪೂಜೆ ಮಾಡಿಸುವವರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ಕಡೆಗೆ ಹೋಗಲು ಅನುಕೂಲ ಆಗಲಿ ಎಂದು ಎರಡೆರಡು ದಿನಗಳಲ್ಲಿ ಹಬ್ಬ ಹರಿ ಹಂಚಿ ಹಾಕುವ ಹೂಟ ನಡೆದಿದೆ ಎಂದು ಹೇಳುವವರೂ ಇದ್ದಾರೆ.


ಈ ಕಾಲದಲ್ಲಿ ಕಕ್ಕೆ ಮರವು ಸರ ಸರವಾಗಿ ಬಂಗಾರದ ಬಣ್ಣದ ಹೂವು ಬಿಡುತ್ತದೆ. ಅದರ ಬಣ್ಣ ಮತ್ತು ಆಕಾರದಿಂದ ಅದನ್ನು ಗೋಲ್ಡನ್ ಶೋವರ್ ಟ್ರೀ ಎಂದು ಹೇಳುವರು. ತುಳುವಿನ ಕಕ್ಕೆಯನ್ನು ಕನ್ನಡದಲ್ಲಿ ಬ್ಯಾಟೆ ಮರ ಎನ್ನುವರು. ಮಲಯಾಳಿಗರು ವಿಶು ಹಬ್ಬವನ್ನು ಈ ಹೂವು ಇಲ್ಲದೆ ಆಚರಿಸುವುದಿಲ್ಲ. ಈಗೀಗ ಪೇಟೆ ಪಟ್ಟಣಗಳವರು ಹಳದಿ ಹೂ ಸಿಕ್ಕರೆ ಸಾಕು ಎಂಬಲ್ಲಿಗೆ ಬಂದಿದ್ದಾರೆ. ಅನುಕೂಲ ಶಾಸ್ತ್ರ ಎನ್ನುವುದು ತುಂಬ ಹಳೆಯ ಗಾದೆ. ಎಷ್ಟೆಲ್ಲ ಆಚಾರ ವಿಚಾರಗಳು ಭಾರತದಲ್ಲಿ ಹೇಗೆಲ್ಲ ಬದಲಾವಣೆ ಕಂಡಿರಬಹುದು. ತುಳುನಾಡಿನ ದೈವಗಳೆಲ್ಲ ಈಗ ವೈದಿಕವಾಗಿ ಮತಾಂತರ ಹೊಂದಿವೆ ಎಂಬುದು ಒಂದೂವರೆ ದಶಕದೀಚಿನ ವಿದ್ಯಮಾನವಾಗಿದೆ.


ಬಿಸು ತುಂಬ ರಂಗು ರಂಗಾಗಿರುವುದು ಮತ್ತು ವೈವಿಧ್ಯಮಯ ಕುಣಿತವನ್ನು ಹೊಂದಿರುವುದು ಅಸ್ಸಾಮದ ಬಿಹು ಮತ್ತು ಪಂಜಾಬಿನ ಬೈಶಾಕಿ ಆಚರಣೆಯಲ್ಲಿ. ಬಿಹು ಅಸ್ಸಾಮಿಯರಿಗೆ ದೊಡ್ಡ ಹಬ್ಬ ಹಾಗೂ ಬೆಳೆ ಹಬ್ಬ. ಈಗ ಅಸ್ಸಾಮಿಯರು ಆಚರಿಸುತ್ತಿರುವುದು ಬೊಹಾಗ್ ಬಿಹು. ಬಿಹು ಕುಣಿತ ಮತ್ತು ಡೋಲಕ್ ಬಡಿತ ವಿಭಿನ್ನ. ಉಡುಗೆಯೂ ಬಹು ರಂಗಿನದು. ಅಸ್ಸಾಂ ಅಲ್ಲದೆ ಈಶಾನ್ಯ ಭಾರತದ ಕೆಲವು ಕಡೆ ಇದನ್ನು ಆಚರಿಸುತ್ತಾರೆ. ಮಕರ ಸಂಕ್ರಾಂತಿಯದು ಬೋಗಲಿ ಬಿಹು. ಕಾರ್ತಿಕದಲ್ಲಿ ಕೋಂಗಲಿ ಬಿಹು, ವಿಶುವಸ್ ಸಂಕ್ರಾಂತಿಯಂದು ರೋಂಗಲಿ ಬಿಹು ಆಚರಿಸುವುದಾಗಿ ತಿಳಿದು ಬಂದಿದೆ. ಬಿಹು ಎಂದರೆ ಸಂಕ್ರಾಂತಿ ಎಂದು ಅಸ್ಸಾಮಿನಲ್ಲಿ ತಿಳಿಯಲಾಗುತ್ತದೆ. ಆದರೆ ಅದು ಪರ್ವ ಮತ್ತು ಬಸಂತ ಸೂಚಕವೂ ಹೌದು.


2024ರಲ್ಲಿ ಪಂಜಾಬಿಗಳು ಬೈಶಾಕಿ ಮತ್ತು ತಮಿಳರು ಪುತ್ತಾಂಡು ದಿನವನ್ನು ಏಪ್ರಿಲ್ 13ರಂದೇ ಆಚರಿಸಿದರು. ಬೈಶಾಕಿಯು ವಸಂತ ಕಾಲದ ಬೆಳೆ ಹಬ್ಬ ಎಂದೇ ಪಂಜಾಬಿಗಳಲ್ಲಿ ಪ್ರಸಿದ್ಧ. ಬೈಶಾಕಿಯ ಬಾಂಗ್ಡಾ ಕುಣಿತ ಮತ್ತು ಡೋಲು ಬಡಿತ ಇಂದು ಜಾಗತಿಕ ಕಲೆಯಾಗಿ ಪ್ರಸಿದ್ಧಿ ಪಡೆದಿದೆ. ಈಗಿನ ಪಾಕಿಸ್ತಾನದ ಸಿಂಧ್ ಪಂಜಾಬ್ ಪ್ರಾಂತ್ಯದಿಂದ ಪಡುವಣ ಬಂಗಾಳದ ಅಂಚಿನವರೆಗೂ ಸಿಂಧೂ ಗಂಗಾ ಬಯಲಿನುದ್ದಕ್ಕೂ ಬೈಶಾಕಿಯನ್ನು ಮೂಲ ನಿವಾಸಿಗಳು ಆಚರಿಸುತ್ತಾರೆ. ಕೆಲವು ಕಡೆ ಅದು ಅನಂತರದ ವೈಶಾಕಿ ರೂಪವನ್ನು ಪಡೆದಿದೆ.


ಸಿಕ್ಕಿಂ ಬುಡಕಟ್ಟು ಜನರಿಗೆ ಇದು ಪ್ರಮುಖ ಬಸಂತ ಕಾಲದ ಬೆಳೆ ಹಬ್ಬವಾಗಿದೆ. ಜಾರ್ಖಂಡ್, ಛತ್ತೀಸಗಡ, ಒಡಿಶಾ ಎಂದು ಬಹಳ ಕಡೆ ಬುಡಕಟ್ಟು ಜನರು ಈ ಬೈಶಾಕಿಯನ್ನು ಆಚರಿಸುತ್ತಾರೆ. ಅವರದೇ ಆದ ರೀತಿ ರಿವಾಜುಗಳು ಇದ್ದರೂ ಮುಖ್ಯವಾಗಿ ಬೆಳೆ ಹಬ್ಬವಾಗಿ, ವಸಂತ ಕಾಲದ ಫಲ ವಸ್ತು ಹಬ್ಬವಾಗಿಯೇ ಇದನ್ನು ಎಲ್ಲ ಕಡೆ ಆಚರಿಸಲಾಗುತ್ತಿದೆ. ಬೈಶಾಕಿಯು ವೈಶಾಖ ತಿಂಗಳಿನ ಮೊದಲ ದಿನವೂ ಆಗಿದೆ. ಬೈಶಾಖಿಯನ್ನು ಸಿಖ್, ಬೌದ್ಧ, ಹಿಂದೂ ಮತ್ತು ಬುಡಕಟ್ಟು ಎಂದು ಮುಖ್ಯವಾಗಿ ಭಾರತದ ಮೂಲ ನಿವಾಸಿಗಳೆಲ್ಲರೂ ಆಚರಿಸುತ್ತಾರೆ. ಸಿಖ್ ಜನರು ಬೈಶಾಕಿ ಹಬ್ಬದಂದು ಗುರುದ್ವಾರಗಳಿಗೆ ಹೋಗಿ ಲಂಗರ್ ಸೇವೆ ಸಲ್ಲಿಸುತ್ತಾರೆ. ಲಂಗರ್ ಸೇವೆ ಎಂದರೆ ಉಚಿತ ಆಹಾರ ಪಾನೀಯ ವಿತರಣೆಯ ಸೇವೆ.
ಬೌದ್ಧರು ವೈಶಾಖದ ಈ ದಿನದಂದು ಬುದ್ಧನು ಜ್ಞಾನೋದಯ ಹೊಂದಿದ್ದಾಗಿಯೂ, ನಿರ್ವಾಣ ಹೊಂದಿದ್ದಾಗಿಯೂ ನಂಬುತ್ತಾರೆ. ಒಡಿಶಾದಲ್ಲಿ ಇದು ಬೈಸಾಕಿ ಪನಾ. ಪಶ್ಚಿಮ ಬಂಗಾಳದಲ್ಲಿ ಪೊಯಿಲ ಬೈಸಾಕ್. ಬಿಹಾರದಲ್ಲಿ ವೈಶಾಕಿ, ಕೇರಳದಲ್ಲಿ ಪೂರಮ್ ವಿಶು, ತಮಿಳುನಾಡಿನಲ್ಲಿ ಪುತ್ತಾಂಡು, ತುಳುವರಲ್ಲಿ ಬಿಸು ಎಂದು ಇದು ಒಟ್ಟಾರೆ ಬಸಂತ ಫಲ ಬೆಳೆಗಳೊಂದಿಗೆ ಸಂಬಂಧ ಪಟ್ಟ ಆಚರಣೆಯಾಗಿದೆ. ಮಾಸ ಸಂಕ್ರಾಂತಿಯೂ ಇದರೊಂದಿಗೆ ಸಂಬಂಧಿಸಿದೆ.
,,,,,,,,,,,,,,,,,,,,,,,,,,

ಬರಹ: ಪೇರೂರು ಜಾರು, ಹಿರಿಯ ಸಂಪಾದಕರು

Related Posts

Leave a Reply

Your email address will not be published.