ಅಯೋಧ್ಯೆ ಹಾಗೂ ಈಜಿಪ್ತ್ ಮತ್ತು ತಾಯ್‍ಲ್ಯಾಂಡ್ ರಾಮ

ಅಯೋಧ್ಯೆಯಲ್ಲಿ ರಾಮ ಮಂದಿರ ತೆರೆದುಕೊಂಡಿದೆ. ಕೆಲರೆಂಬಂತೆ ಅದು ಅರೆಬರೆ. ಪ್ರಧಾನಿ ಮೋದಿಯವರು ರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಗರ್ಭಗುಡಿಯ ವ್ಯಕ್ತಿ. ರಾಮ ಚಾರಿತ್ರಿಕವೇ, ಪುರಾಣವೇ? ಪುರಾಣ ಎಂಬುದು ಅಭಿಮತ. ಆದರೆ ಸಂಪೂರ್ಣ ದಾಖಲೆಯ ಚಾರಿತ್ರಿಕ ರಾಮರು ಭಾರತದಲ್ಲಿ ಅಲ್ಲ, ಈಜಿಪ್ತಿನಲ್ಲಿ ಇದ್ದರು; ತಾಯ್‍ಲ್ಯಾಂಡ್‍ನಲ್ಲಿ ಇರುವರು. ಮೂರೂವರೆ ಸಾವಿರ ವರುಷಗಳ ಹಿಂದೆ ಈಜಿಪ್ತಿನಲ್ಲಿ ರಾಮಸೆಸ್ ರಾಜರು ಇದ್ದರು. ಎರಡನೆಯ ರಾಮಸೆಸ್ ತುಂಬ ಪ್ರಸಿದ್ಧ. ರಾಮಸೆಸ್ ಎಂದರೆ ಅರ್ಥ. ಈಜಿಪ್ತ್ ಭಾಷೆಯ ರಾ ಎಂದರೆ ಸೂರ್ಯನ ಮೂಲದವರು ಎಂದು. ವಿಚಿತ್ರ ಎಂದರೆ ನಮ್ಮ ರಾಮ ಕೂಡ ಸೂರ್ಯ ವಂಶಜ. ರಾಮಾಯಣಗಳಲ್ಲಿ ಬರುವ ಸ್ಥಳಗಳು ಇವೆ. ಆದರೆ ರಾಮ ಜನರ ಚಾರಿತ್ರಿಕ ದಾಖಲೆ ನಮ್ಮಲ್ಲಿ ಇಲ್ಲ. ಈಗಲೂ ಆಳುತ್ತಿರುವ ರಾಮ ವಂಶಜರು ತಾಯ್‍ಲ್ಯಾಂಡ್ ಅರಸರು. ಈಗಿನ ರಾಜ ವಜೀರಲಾಂಗ್‍ಕಾರ್ನ್ ಹತ್ತನೆಯ ರಾಮ ಎಂದು ಪ್ರಸಿದ್ಧ.

ರಾಮಕೀನ್ ಎಂಬುದು ತಾಯ್‍ಲ್ಯಾಂಡಿನ ರಾಮಾಯಣ. ಅಲ್ಲಿನ ರಾಜ ಗ್ರಂಥ. ಆದರೆ ಕತೆಯಲ್ಲಿ ವ್ಯತ್ಯಾಸ ಇದೆ. ಕುಮಾರವ್ಯಾಸ ಭಾರತ ಬರೆದ ಗದುಗಿನ ನಾರಣಪ್ಪ ಇಲ್ಲವೇ ಕುಮಾರವ್ಯಾಸನು ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ಎಂದು ಹೇಳಿದ್ದಾನೆ. ಎ. ಕೆ. ರಾಮಾನುಜನ್ ಅವರು 300 ರಾಮಾಯಣಾಸ್ ಎಂಬ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಕಥಾ ವ್ಯತ್ಯಾಸದ ಐದು ಉದಾಹರಣೆಗಳನ್ನು ಮತ್ತು ಮೂರು ವಿಭಿನ್ನ ತಾತ್ವಿಕತೆಗಳನ್ನು ಹೇಳಿದ್ದಾರೆ. ಬೌದ್ಧ, ಜೈನ, ವೈದಿಕ ರಾಮಾಯಣ ಎಂಬುದೇ ಮೂರು ತಾತ್ವಿಕತೆಗಳು. ವಾಲ್ಮೀಕಿಯದು ಮೂಲ ರಾಮಾಯಣ ಎನ್ನಲಾಗುತ್ತಿದೆ. ಆದರೆ ಸಂಸ್ಕೃತ ಬರವಣಿಗೆ ಆರಂಭವಾದುದು ಕ್ರಿಸ್ತ ಶಕದ ಹೊತ್ತಿನಲ್ಲಿ. ಸಂಸ್ಕೃತ ಬರವಣಿಗೆ ಸಾಹಿತ್ಯವು ಗುಪ್ತರ ಕಾಲದಲ್ಲಿ ಆರಂಭವಾಯಿತು. ವಾಲ್ಮೀಕಿ ಈ ಕಾಲದ ಕವಿ ಎನ್ನುವುದೇ ಸತ್ಯ ಇರಬೇಕು.

ಆಗ್ನೇಯ ಏಶಿಯಾದಲ್ಲಿ ಇರುವುದು ಬೌದ್ಧ, ಜೈನ ರಾಮಾಯಣಗಳೇ ಹೊರತು ವೈದಿಕ ರಾಮಾಯಣಗಳು ಅಲ್ಲ. ನಾಗಚಂದ್ರನ ಕನ್ನಡ ಜೈನ ರಾಮಾಯಣದಲ್ಲಿ ರಾವಣ ಕ್ರೂರಿಯಲ್ಲ. ಹವ್ಯಕರು ರಾವಣನಂತೆ ಶಿವ ಭಕ್ತರು.
ಹಾಗಾಗಿ ರಾಮಾಯಣದ ಎಲ್ಲ ಕತೆಗಳನ್ನು ಆಟ ಯಕ್ಷಗಾನ ಮಾಡಿದರೂ ಇವರು ರಾವಣ ವಧೆ ಪ್ರಸಂಗ ಮಾಡಿಲ್ಲ. ರಾಮಾಯಣದಲ್ಲೇ ರಾಮನು ಶಿವನನ್ನು ಪೂಜಿಸುವವನು.
ಕ್ರಿಸ್ತ ಪೂರ್ವದ ವಿಮಲಸೂರಿಯ ಪಾಕೃತ ಭಾಷೆಯ ಪವುಮಚರಿಯ ಬೌದ್ಧ ರಾಮಾಯಣದಂತೆಯೇ ವೈದಿಕ ರಾಮಾಯಣಕ್ಕಿಂತ ಹಿಂದಿನದು. ಅದರಲ್ಲಿ ಶಂಭೂಕನ ಕತೆಗೆ ಮುಖ್ಯತ್ವವಿದೆ. ಹನುಮಂತನು ಸಂಸಾರಿ. ವಾಲಿ ಮೊದಲಾದವರು ಕಪಿಗಳಲ್ಲ ಕಪಿ ಬಾವುಟದವರು.
ರಾವಣ, ಲಕ್ಷ್ಮಣರ ಪಾತ್ರಕ್ಕೆ ಮಹತ್ವವಿದೆ. ಸೀತೆ ಸಹಜ ಸುತೆ.
ಬೌದ್ಧ, ಜೈನ ರಾಮಾಯಣಗಳ ಮೇಲೆ ವೈದಿಕ ರಾಮಾಯಣದ ಸವಾರಿಯೇ ಈಗಿನ ಯಕ್ಷಗಾನಗಳು ಸಮಾಜಕ್ಕೆ ಬೆನ್ನು ಹಾಕಲು ಕಾರಣವಾಗಿದೆ ಎನ್ನಬಹುದು.

ಬಂಗಾಳದ ರಾಮಾಯಣದಲ್ಲಿ ಮತ್ತು ಕೆಲವು ರಾಮಾಯಣಗಳಲ್ಲಿ ಸೀತೆಯು ರಾವಣನ ಮಗಳು. ಅಯೋಧ್ಯೆಗೆ ಹಿಂತಿರುಗಿದ ಮೇಲೆ ಸೀತೆಯು ರಾವಣನ ಚಿತ್ರ ರಚಿಸಿದಳು ಎಂಬ ಕತೆಯೂ ಇದೆ. ರಾಮ ಪಥಕ್ ರಾಮಾಯಣದಲ್ಲಿ ಸೀತೆ ಸಹೋದರಿ. ಅದರಲ್ಲಿ ಲಂಕೆ, ರಾವಣರೆಲ್ಲ ಇಲ್ಲ. ವಿಚಿತ್ರವೆಂದರೆ ಈ ಸಹೋದರಿಯನ್ನು ಕೆಲವೊಮ್ಮೆ ಮದುವೆ ಆಗುವ ಪದ್ಧತಿ ಈಜಿಪ್ತ್ ರಾಜ ವಂಶಜರಲ್ಲಿ ಇತ್ತು. ಈಜಿಪ್ತಿಗೆ ಹತ್ತಿರದ ಪಶ್ಚಿಮ ಏಶಿಯಾದಿಂದ ಬಂದ ಪಾರಸಿಗಳಲ್ಲಿಯೂ ಕೆಲವೊಮ್ಮೆ ತಂಗಿಯನ್ನು ಮದುವೆಯಾಗುವ ಕ್ರಮ ಇದೆ. ಉತ್ತರ ಕರ್ನಾಟಕದ ಜನಪದದಲ್ಲಿ ಸೀತೆಯನ್ನು ಮದುವೆ ಆಗಲು ಕಾಗೆ ಕೊಲ್ಲುವ ಪಣ ಇತ್ತಂತೆ. ರಾಮ ಲಕ್ಷ್ಮಣರು ಕವಣೆಯಿಂದ ಕಾಗೆಗಳನ್ನು ಕೊಂದು ಕಾಟ ಕಳೆದು ಸೀತೆಯನ್ನು ಗೆದ್ದರಂತೆ. ಇದು ಮುಂದೆ ಸೀತೆಯನ್ನು ಕಾಕಾಸುರ ಕಾಡುವ, ರಾಮ ಕೊಲ್ಲುವ ಪುರಾಣ ಹುಟ್ಟಲು ಮೂಲ ಇರಬಹುದು.

ಬಸವಣ್ಣನವರು ಉಳ್ಳವರು ಶಿವಾಲಯ ಮಾಡಿದರು, ನಾನೇನ ಮಾಡುವೆ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯ ಕೂಡಲಸಂಗಮ ದೇವಾ ಸ್ಥಾವರಕಳಿವುಂಟು ಜಂಗಮಕಳಿವಿಲ್ಲ ಎಂದರು. ಕಲ್ಯಾಣದಲ್ಲಿ ವೈದಿಕ ದೊಂಬಿಯಿಂದ ಶರಣ ಸ್ಥಾವರ ಅಳಿಯಿತು, ಓಡಿದ ಜಂಗಮರಿಂದ ಶರಣ ಪಥ ಉಳಿಯಿತು. ಈಗ ದೇಣಿಗೆ ಎತ್ತಬಲ್ಲ ಶೂರರು ರಾಮಾಲಯ ಕಟ್ಟಿಹರು, ಜನ ಸಾಮಾನ್ಯ ಏನ ಮಾಡಬಲ್ಲ ಬಡವನಯ್ಯಾ, ಅವನ ಬೆನ್ನೇ ತಳಪಾಯ, ಕುತ್ತಿಗೆಯೆ ಕಂಬ, ಭಕ್ತಿಯೇ ಧರ್ಮ, ವ್ಯಕ್ತವೇ ಕರ್ಮ. ಜಂಗಮನಿವ ಸ್ಥಾವರಕೆ ದುಡಿವನು ಹಾಗೂ ತುಡಿವನು.

ಮೈಸೂರು ಬಳಿಯಲ್ಲಿ ಇದೆ ಗುಜ್ಜೇಗೌಡನ ಗ್ರಾಮ. ಇಲ್ಲಿಯ ದಲಿತ ರೈತ ರಾಮದಾಸ್. ಉದ್ಘಾಟನೆ ಆಗುತ್ತಿರುವ ರಾಮ ಲಲ್ಲಾ ಮೂರ್ತಿಯ ಕಲ್ಲು ಈ ರಾಮದಾಸ್ ಹೊಲದ್ದು. ಇಲ್ಲಿಕತೆ ಮಾಮೂಲಿ, ದಲಿತ ರಾಮದಾಸ್‍ಗೆ ಅಯೋಧ್ಯೆಯ ಬಾಲ ರಾಮ ಉದ್ಘಾಟನೆಗೆ ಕರೆಯೋಲೆ ಇಲ್ಲ. ರಾಮದಾಸ್ 2.14 ಎಕರೆ ಹೊಲ ಹೊಂದಿದ್ದು, ಅದರಲ್ಲಿ ಬಂಡೆಗಳು ಇದ್ದವು. ಅವನ್ನು ನೀಗಲು ಬಯಸಿದಾಗ ಅರುಣ್ ಯೋಗಿರಾಜ್‍ರ ಕಡೆಯ ಮನ್ನಯ್ಯ ಬಡಿಗರ್, ನರೇಂದ್ರ ಶಿಲ್ಪಿ, ಗೋಪಾಲ್ ಬಂದು ರಾಮದಾಸ್‍ರನ್ನು ನೋಡಿದರು. 10 ಅಡಿಗೂ ಹೆಚ್ಚು ಉದ್ದದ ಮೂರು ಬಂಡೆಗಳು ಇದ್ದವು. ಅಯೋಧ್ಯೆ ಮತ್ತಿತರ ತಜ್ಞರು ಒಂದು ಕಲ್ಲನ್ನು ಆರಿಸಿದರು. ಲಕ್ಷ್ಮಣ, ಭರತ, ಶತ್ರುಘ್ನ ಕೆತ್ತನೆಗೂ ಇವರ ಹೊಲದ ಕಲ್ಲೇ ಹೋಗಿದೆ.
ಈಗ ಊರವರು ಇಲ್ಲಿ ರಾಮ ಮಂದಿರ ಬೇಕು ಎಂದಿದ್ದಾರೆ. ರಾಮದಾಸ್ ಅದಕ್ಕೂ ಈಗ ನೆಲ ದಾನ ಮಾಡಿದ್ದಾರೆ.
ಆಗುವ ರಾಮ ಮಂದಿರ ಉದ್ಘಾಟನೆಗೆ ದಲಿತ ರಾಮದಾಸ್‍ಗೆ ಆಹ್ವಾನ ಇರುತ್ತದೋ ಇಲ್ಲವೋ ಗೊತ್ತಿಲ್ಲ.

ವಾಲ್ಮೀಕಿ ರಾಮಾಯಣವು 24,000 ಶ್ಲೋಕಗಳ, 4,30,000 ಶಬ್ದಗಳ ಕಾವ್ಯ. ಇದರಲ್ಲಿ ಉತ್ತರ ಕಾಂಡ ಇಲ್ಲ. ತುಲಸಿದಾಸನು ತನ್ನ ರಾಮ ಚರಿತ ಮಾನಸದಲ್ಲಿ ಉತ್ತರ ಕಾಂಡ ಸೇರಿಸಿದಂತೆ ಕಾಣುತ್ತದೆ. ಏಕ ಬಾಣ, ಏಕ ಪತ್ನಿ, ಏಕ ವಚನ ರಾಮ. ಮರ್ಯಾದಾ ಪುರುಷೋತ್ತಮ ರಾಮ ಇವೆಲ್ಲ ತುಲಸಿದಾಸರದು, ವಾಲ್ಮೀಕಿ ಅವರದಲ್ಲ. ಅಣುರೇಣು ತೃಣ ಕಾಷ್ಟಗಳಲ್ಲಿ ಇರುವ ಯಾವ ಧರ್ಮದ ದೇವರು ಕೂಡ ದಾಳಿಯ ವೇಳೆ ತಮ್ಮನ್ನು ರಕ್ಷಿಸಿಕೊಂಡ ಉದಾಹರಣೆ ಇಲ್ಲ. ಆದರೆ ಯಾವುದೇ ಧರ್ಮದ ಜನರ ಭಕ್ತಿ ಮಾತ್ರ ಕಡಿಮೆ ಆಗಿಲ್ಲ. ಭಕ್ತಿಯೊಂದು ಚಟ ಎಂಬ ತೀರ್ಮಾನಕ್ಕೆ ಮನೋಶಾಸ್ತ್ರಜ್ಞರು ಬರಬಹುದು.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.