ಸುರತ್ಕಲ್ ಟೋಲ್ ಗೇಟ್ ರದ್ದು: ಬಸ್ಸು ಪ್ರಯಾಣ ದರ ಇಳಿಕೆಗೆ ಹೋರಾಟ ಸಮಿತಿ ಆಗ್ರಹ

ಸುರತ್ಕಲ್ ಟೋಲ್ ಗೇಟ್ ದಾಟಿ ಮುಲ್ಕಿ, ಕಿನ್ನಿಗೋಳಿ, ಮುಕ್ಕ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳು ಪ್ರಯಾಣಿಕರ ಟಿಕೆಟ್ ಮೇಲೆ ಹಾಕಿದ್ದ ಟೋಲ್ ತೆರಿಗೆಯನ್ನು ತಕ್ಷಣವೇ ಕೈಬಿಟ್ಟು ಪ್ರಯಾಣ ದರವನ್ನು ಇಳಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಏಳು ವರ್ಷಗಳ ಹಿಂದೆ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಆರಂಭಗೊಂಡಾಗ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಮುಂತಾದ ಮಂಗಳೂರು ಗ್ರಾಮೀಣ ಭಾಗಗಳಿಗೆ ಸಂಚರಿಸುತ್ತಿದ್ದ ಖಾಸಗಿ ಸರ್ವೀಸ್ ಬಸ್ಸುಗಳು ಹಾಗು ಉಡುಪಿ, ಕಾರ್ಕಳ, ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ಸುಗಳು ಟಿಕೆಟ್ ಮೇಲೆ ಟೋಲ್ ದರವನ್ನು ಸೇರಿಸಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸತೊಡಗಿದ್ದವು. ಆ ಮೂಲಕ ಟೋಲ್ ಸುಂಕದ ಹೊರೆ ಪ್ರಯಾಣಿಕ ಮೇಲೆ ವರ್ಗಾವಣೆಗೊಂಡಿತ್ತು.‌

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳು, ಜನಸಾಮಾನ್ಯರು ನಡೆಸಿದ ಸತತ ಹೋರಾಟದ ಪರಿಣಾಮ ಸುರತ್ಕಲ್ ಟೋಲ್ ಗೇಟ್ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. ಜನತೆಯನ್ನು ಟೋಲ್ ಸುಂಕದ ಭಾರದಿಂದ ಬಿಡುಗಡೆಗೊಳಿಸಬೇಕು ಎಂಬ ಪ್ರಧಾನ ಬೇಡಿಕೆ ಇಟ್ಟು ನಡೆದ ಹೋರಾಟದ ಯಶಸ್ಸಿನ ಲಾಭ ಸಹಜವಾಗಿಯೇ ಬಲವಂತವಾಗಿ ಟೋಲ್ ಪಾವತಿ ಮಾಡುತ್ತಿದ್ದ ವಿಭಾಗಗಳಿಗೆ ದೊರಕಬೇಕು. ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸುವ ಬಹುತೇಕರು ಕಡಿಮೆ ವೇತನ, ಭದ್ರತೆಯಿಲ್ಲದ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರು. ಟೋಲ್ ಗೇಟ್ ಮುಚ್ಚಲ್ಪಟ್ಟಿರುವುದರಿಂದ ಪ್ರಯಾಣಿಕರನ್ನು ಟೋಲ್ ಹೊರೆಯಿಂದ ಮುಕ್ತಗೊಳಿಸಬೇಕು. ಟಿಕೇಟ್ ಮೇಲೆ ವಿಧಿಸುತ್ತಿದ್ದ ಐದು ರೂಪಾಯಿಯಷ್ಟು ಟೋಲ್ ಶುಲ್ಕವನ್ನು ಬಸ್ಸು ಮಾಲಕರು ತಕ್ಷಣದಿಂದಲೇ ಕೈಬಿಡಬೇಕು. ಜಿಲ್ಲಾಧಿಕಾರಿಗಳು ಈ ಕುರಿತು ಬಸ್ಸು ಮಾಲಕರಿಗೆ ಸೂಚನೆಯನ್ನು ನೀಡಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ‌.

ಸುರತ್ಕಲ್ ಟೋಲ್ ಗೇಟ್ ಅಧಿಕೃತವಾಗಿ ಮುಚ್ಚಲ್ಪಟ್ಟಿರುವುದರಿಂದ ಮುಕ್ಕ, ಕಿನ್ನಿಗೋಳಿ, ಮುಲ್ಕಿ ಭಾಗದ ಬಸ್ಸುಗಳು ಶಾಶ್ವತವಾಗಿ ಟೋಲ್ ಸುಂಕದಿಂದ ಪಾರಾಗಿವೆ. ಈ ದಾರಿಯಲ್ಲಿ ಸಂಚರಿಸುವ ಬಸ್ಸುಗಳು ತಕ್ಷಣವೇ ದರ ಇಳಿಸಬೇಕು. ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಕ್ಕೆ ತಡೆ ಬಿದ್ದಿರುವುದರಿಂದ ಅಂತಿಮ ಇತ್ಯರ್ಥದವರಗೆ ಕಾಯದೆ ಉಡುಪಿ, ಕಾರ್ಕಳ, ಕುಂದಾಪುರ ಕಡೆಗೆ ಸಂಚರಿಸುವ ಬಸ್ಸುಗಳು ಟಿಕೆಟ್ ಮೇಲಿನ ಸುರತ್ಕಲ್ ಟೋಲ್ ದರವನ್ನು ತಾತ್ಕಾಲಿಕ ನೆಲೆಯಲ್ಲಿ ಕಡಿತಗೊಳಿಸಬೇಕು, ಆ ಮೂಲಕ ಟೋಲ್ ದರ ಪಾವತಿಸುತ್ತಿದ್ದ ವಿಭಾಗಗಳಿಗೆ ಸುರತ್ಕಲ್ ಟೋಲ್ ಗೇಟ್ ರದ್ದುಗೊಂಡಿರುವುದರ ಪಾಲನ್ನು ನ್ಯಾಯಯುತವಾಗಿ ಒದಗಿಸಿಕೊಡಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ‌

Related Posts

Leave a Reply

Your email address will not be published.