​ಟಿ. ಎನ್. ಸೀತಾರಾಂ ಅವರಿಗೆ “ಪಂಚಮಿ ಪುರಸ್ಕಾರ_2026”

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ ‘ಪಂಚಮಿ ಪುರಸ್ಕಾರ 2026’ ಕ್ಕೆ ಕನ್ನಡದ ಹಿರಿಯ ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ, ನಟ, ನಾಟಕಕಾರ, ಸಾಹಿತಿ ಟಿ. ಎನ್. ಸೀತಾರಾಂ ಆಯ್ಕೆಯಾಗಿದ್ದಾರೆ .​ ಜನವರಿ ತಿಂಗಳಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಗೌರವದನ ಒಂದು ಲಕ್ಷದೊಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್‌.ಪಿ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಪ್ರಶಸ್ತಿ ಸಮಿತಿಯ ಸಂಚಾಲಕ ಜನಾರ್ದನ ಕೊಡವೂರು​, ಉಪಾಧ್ಯಕ್ಷ ಮಧುಸೂದನ ಹೇರೂರು ಉಪಸ್ಥಿತರಿದ್ದರು.

ಟಿ. ಎನ್. ಸೀತಾರಾಂ ಕಿರುತೆರೆ ದಾರಾವಾಹಿ ಮೂಲಕ ಮನೆಮಾತಾಗಿರುವ​ ಟಿ. ಎನ್. ಸೀತಾರಾಂ 1948ರ ಡಿಸೆಂಬರ್ 6 ರಂದು ಜನಿಸಿದರು. ಪತ್ರಕರ್ತ, ಕತೆಗಾರ, ನಾಟಕಕಾರ, ಚಿತ್ರ ನಟ, ಚಿತ್ರ ನಿರ್ದೇಶಕರಾಗಿಯೂ ಛಾಪು ಮೂಡಿಸಿದವರು. ಮೂಲತಃ ಗೌರಿಬಿದನೂರಿನವರಾದ ಸೀತಾರಾಂ, ತಂದೆಯವರು ನಾರಾಯಣರಾಯರು ಮತ್ತು ತಾಯಿ ಸುಂದರಮ್ಮನವರು. ಕೃಷಿಯನ್ನಾಶ್ರಯಿಸಿದ ಕುಟುಂಬ ಅವರದ್ದು. ಪ್ರಾರಂಭಿಕ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಸೀತಾರಾಂ ಮುಂದೆ ಬೆಂಗಳೂರು ನ್ಯಾಷನಲ್ ಕಾಲೇಜಿನ ವಿದಾರ್ಥಿಯಾದರು. ಬಿ.ಎಸ್ಸಿ, ಬಿ.ಎಲ್ ಓದಿದ ಅವರು ನ್ಯಾಯವಾದದ ಕಾಯಕವನ್ನು ಒಂದಷ್ಟು ನಡೆಸಿದರಾದರೂ, ಆಂತರ್ಯದ ತುಡಿತ ಅವರನ್ನು ಬರಹಗಾರನನ್ನಾಗಿಸಿತು. ಲೋಹಿಯಾ ತತ್ತ್ವಗಳನ್ನು ನಂಬಿದವರಾದ ಸೀತಾರಾಂ, ತಮ್ಮ ಬದುಕು ಮತ್ತು ಕಾರ್ಯ ಕ್ಷೇತ್ರಗಳೆಲ್ಲದರಲ್ಲಿ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಂಡು ಬಂದ ಅಪೂರ್ವ ವ್ಯಕ್ತಿತ್ವದವರು.

ಸಣ್ಣಕತೆ ಮತ್ತು ನಾಟಕ ಪ್ರಕಾರಗಳಲ್ಲಿ ಅವರ ಪ್ರಥಮ ನಾಟಕ ‘ಯಾರಾದರೇನಂತೆ?’. ನಂತರದ ದಿನಗಳಲ್ಲಿ ಮೂಡಿ ಬಂದದ್ದು ‘ಮನ್ನಿಸು ಪ್ರಭುವೆ’. ಈ ಎರಡೂ ನಾಟಕಗಳು ಅವರಿಗೆ ಪ್ರಶಸ್ತಿಗಳನ್ನು ತಂದಿತು. ಮುಂದೆ ಬಂದ ಅವರ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ನಾಟಕಗಳು ನೂರಾರು ಪ್ರಯೋಗಗಳನ್ನು ಕಂಡು ಜನಪ್ರಿಯಗೊಂಡಿವೆ. ಈ ನಾಟಕಗಳು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಗೊಂಡಷ್ಟು ವ್ಯಾಪ್ತಿ ಪಡೆದಂತಹವು. 300ಕ್ಕೂ ಹೆಚ್ಚು ಯಶಸ್ವೀ ಪ್ರಯೋಗ ಕಂಡ ‘ಆಸ್ಪೋಟ’ ನಾಟಕ, ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾದ ಕೃತಿ. ಅದು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿ, ದೂರದರ್ಶನದ ಟೆಲಿ ಧಾರಾವಾಹಿಯಾಗಿತ್ತು. ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕವೂ ಕೂಡ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಗೆ ಪಾತ್ರವಾದ ಕೃತಿ.

ಸೀತಾರಾಂ ಅವರ 22 ಸಣ್ಣ ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ‘ಕ್ರೌರ್ಯ’ ಸಣ್ಣ ಕತೆಯನ್ನು ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿ ನಿರ್ಮಿಸಿದ್ದರು. ಅದಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.

ಸೀತಾರಾಂ ಅವರು ರಂಗಭೂಮಿ, ಚಲನಚಿತ್ರ, ಕಿರುತೆರೆಯ ನಟರಾಗಿಯೂ ಸಾಕಷ್ಟು ಹೆಸರು ಮಾಡಿದವರು. ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಪಲ್ಲವಿ’ ಚಿತ್ರದ ನಾಯಕರಾಗಿ ಅಭಿನಯಿಸಿದ್ದರು.

ಸೀತಾರಾಂ ಪುಟ್ಟಣ್ಣ ಕಣಗಾಲರ ಮೂರು ಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಗಳನ್ನು ರಚಿಸಿದ ಕೀರ್ತಿಗೆ ಪಾತ್ರರಾದವರು. ಪುಟ್ಟಣ್ಣನವರ ‘ಮಾನಸ ಸರೋವರ’ ಹಾಗೂ ಪಿ.ಎಚ್.ವಿಶ್ವನಾಥ್ ನಿರ್ದೇಶನದ ‘ಪಂಚಮವೇದ’ ಚಿತ್ರಗಳ ಸಂಭಾಷಣೆಗಾಗಿ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಆರ್. ಕೆ ನಾರಾಯಣ್ ಅವರ ಇಂಗ್ಲಿಷ್ ಕಾದಂಬರಿ ಆಧಾರಿತ ‘ಬ್ಯಾಂಕರ್ ಮಾರ್ಗಯ್ಯ’ ಚಿತ್ರಕ್ಕೂ ಸೀತಾರಾಂ ಅವರ ಸಂಭಾಷಣೆಯಿತ್ತು. 1991ರಲ್ಲಿ ಆ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತು.

ಸೀತಾರಾಮ್ ನಿರ್ದೇಶಿಸಿದ ಮೊದಲ ಚಲನಚಿತ್ರ ಎಸ್. ಎಲ್. ಭೈರಪ್ಪನವರ ‘ಮತದಾನ’ ಕಾದಂಬರಿ ಆಧರಿಸಿದ ಅದೇ ಹೆಸರಿನ ಚಿತ್ರ. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರವೆಂಬ ಮನ್ನಣೆ – ಪ್ರಶಸ್ತಿಗೆ ಪಾತ್ರವಾಯಿತು. ಅವರ ನಿರ್ದೇಶನದ ಮತ್ತೊಂದು ಸದಭಿರುಚಿಯ ಚಲನಚಿತ್ರ ‘ಮೀರಾ, ಮಾಧವ, ರಾಘವ’. 2017ರಲ್ಲಿ ಮೂಡಿದ್ದು ‘ಕಾಫಿ ತೋಟ’.

ಸೀತಾರಾಂ ಅವರು ಕಿರುತೆರೆಗೆ ನಿರ್ಮಿಸಿದ ಟಿ.ಪಿ. ಕೈಲಾಸಂ, ಆಸ್ಫೋಟ, ಮುಖಾಮುಖಿ, ಪತ್ತೇದಾರ ಪ್ರಭಾಕರ, ಕಾಲೇಜುತರಂಗ, ಎಲ್ಲ ಮರೆತಿರುವಾಗ, ನಾವೆಲ್ಲರೂ ಒಂದೇ, ದಶಾವತಾರ, ಕಾಮನಬಿಲ್ಲು, ಕತೆಗಾರ, ಜ್ವಾಲಾಮುಖಿ ಧಾರಾವಾಹಿಗಳು ಅತ್ಯಂತ ಮೆಚ್ಚುಗೆ ಗಳಿಸಿದಂತಹವು.

ಬೆಂಗಳೂರು ದೂರದರ್ಶನಕ್ಕಾಗಿ ನಿರ್ದೇಶಿಸಿದ ‘ಮಾಯಾಮೃಗ’ ಧಾರಾವಾಹಿ 435 ಕಂತುಗಳಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯಗೊಂಡಿದೆ.

ಖಾಸಗಿ ವಾಹಿನಿಗಳಲ್ಲಿ ಹಲವು ನೂರು ಕಂತುಗಳಲ್ಲಿ ಪ್ರಸಾರಗೊಂಡು ಜನಪ್ರಿಯವಾದಂತಹವು ‘ಮನ್ವಂತರ’ ಮತ್ತು ‘ಮುಕ್ತ’, ‘ಮಗಳು ಜಾನಕಿ’ ಧಾರಾವಾಹಿಗಳು. ಈ ಧಾರಾವಾಹಿಗಳಲ್ಲಿನ ಚುರುಕಿನ ಸಂಭಾಷಣೆ, ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸುವ ವಿಧಾನ, ವೀಕ್ಷಕರನ್ನು ಸಾಮಾಜಿಕ ಸಮಸ್ಯೆಗಳತ್ತ ಗಂಭೀರವಾಗಿ ಚಿಂತಿಸುವಂತೆ ಮಾಡುವಲ್ಲಿ ಪರಿಣಾಮಕಾರಿಯಾಗಿವೆ. ಸೀತಾರಾಂ ಅವರು ನ್ಯಾಯಾಲಯದ ದೃಶ್ಯಗಳನ್ನು ಜೋಡಿಸುವ ವಿಧಾನ, ಜಾಣ್ಮೆಯ ಮಾತುಗಳು ಪ್ರಜ್ಞಾವಂತರಲ್ಲಿ ಸಹಾ ಸಂಚಲನೆಯನ್ನು ತರುವಂತಹವು. ಅದೇ ಹಿನ್ನೆಲೆಯುಳ್ಳ ಒಂದು ವೆಬ್ ಸರಣಿಯನ್ನು ಮೂಡಿಸುವ ತಯಾರಿಯಲ್ಲಿದ್ದಾರೆ. ಅವರ ಮತ್ತೊಂದು ಧಾರಾವಾಹಿ ಕೂಡಾ ​ಸದ್ಯದಲ್ಲಿಯೇ ತೆರೆ ಕಾಣಲಿದೆ.

Related Posts

Leave a Reply

Your email address will not be published.