ತೊಕ್ಕೊಟ್ಟು : ಒಂದು ದಿನದ ಗಂಡುಮಗು ರಸ್ತೆ ಬದಿಯಲ್ಲಿ ಪತ್ತೆ

ಉಳ್ಳಾಲ: ರಸ್ತೆ ಬದಿಯಲ್ಲಿ ಒಂದು ದಿನದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾರೋಡಿನ ಗೇರು ಅಭಿವೃದ್ದಿ ಕೇಂದ್ರದ ಬಳಿ ನಡೆದಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಎಂಬವರ ಮನೆಯ ಎದುರುಗಡೆ ಗೇಟಿನ ಹೊರಗಡೆ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಮನೆಮಂದಿ ಬೆಳಿಗ್ಗೆ ಏಳುವಾಗ ಮಗು ಕೂಗುತ್ತಿರುವುದನ್ನು ಗಮನಿಸಿ ಹೊರಹೋದಾಗ ಕಾರಿನ ಕೆಳಗಡೆ ಬಿಳಿ ಬಟ್ಟೆ ಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಒಂದು ದಿನದ ಮಗು ಪತ್ತೆಯಾಗಿದೆ. ಕೂಡಲೇ ಮನೆಮಂದಿ ಉಪಚರಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಸಂದರ್ಭ ಒಂದು ದಿನದ ಮಗು ಎಂಬುದು ಗೊತ್ತಾಗಿದೆ. ಉಳ್ಳಾಲ ಪೊಲೀಸರು ವಿವಿಧ ಆಸ್ಪತ್ರೆಗಳಿಂದ ಮಾಹಿತಿ ಕಲೆಹಾಕುತ್ತಿದ್ದಾರೆ.

ಸದ್ಯ ಮಗುವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿರುತ್ತದೆ. ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ‌ ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿದ ನಂತರ ಹೆತ್ತವರು ಅಥವಾ ಸಂಬಂಧಿಕರು ಬಂದು ಎರಡು ತಿಂಗಳ ಒಳಗೆ ವಿಚಾರಿಸಿದಲ್ಲಿ ಅವರ ಸುಪರ್ದಿಗೆ ನೀಡಲಾಗುವುದು ಎಂದು ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶಕರು ತಿಳಿಸಿದ್ದಾರೆ.

Related Posts

Leave a Reply

Your email address will not be published.