ಪಿ.ಬಿ.ಹರೀಶ್ ರೈ ರವರು ಬರೆದ ಮತಪೆಟ್ಟಿಗೆ ಕೃತಿ ಬಿಡುಗಡೆ

ಪತ್ರಕರ್ತ ಪಿ.ಬಿ. ಹರೀಶ್ ರೈ ಅವರು ಬರೆದಿರುವ ಮತಪೆಟ್ಟಿಗೆ ಕರಾವಳಿ ಜನರ ತೀರ್ಪು ಕೃತಿ ಲೋಕಾರ್ಪಣೆ ಕಾರ್ಯಕ್ರಮವು ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು.
ಆಕೃತಿ ಆಶಯ ಪಬ್ಲಿಕೇಷನ್ಸ್ ಪ್ರಕಟಿಸಿರುವ ಪಿ.ಬಿ.ಹರೀಶ್ ರೈ ಬರೆದಿರುವ ಮತಪೆಟ್ಟಿಗೆ ಕೃತಿಯನ್ನು ಮಂಗಳೂರಿನ ಜಿ.ಆರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಎಸ್.ಗಣೇಶ್ ರಾವ್ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಎಲ್ಲರನ್ನು ಒಟ್ಟುಗೂಡಿಸಿ ಮತಪೆಟ್ಟಿಗೆ ಕೃತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು, ಮತಪೆಟ್ಟಿಗೆ ಒಂದು ವಿಶೇಷವಾದ ಕೃತಿ, ರಾಜಕೀಯ ಜೀವನದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಈ ಕೃತಿಯಿಂದ ಆಗಲಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಪ್ರತಿಯೊಬ್ಬರ ಜೀವನಕ್ಕೂ ಇಂತಹ ಪುಸ್ತಕಗಳೂ ಉಪಕಾರಿಯಾಗಿದೆ. ರಾಜಕಾರಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಮಾಜ ಸುಧಾರಣೆಯಾಗಲು ಪ್ರತಿಯೊಬ್ಬ ಪತ್ರಕರ್ತರು ಇಂತಹ ಪುಸ್ತಕವನ್ನು ಬರೆಯಬೇಕು, ದೇಶಾದ್ಯಂತ ಪತ್ರಕರ್ತರು ಶ್ರಮವಹಿಸಿದರೆ ಸಮಾಜ ಸುಧಾರಣೆಯಾಗಲಿದೆ ಎನ್ನುವುದು ನನ್ನ ಭಾವನೆ ಎಂದ ಅವರು, ಪಿ.ಬಿ.ಹರೀಶ್ ರೈ ಇನ್ನೂ ಹೆಚ್ಚು ಪುಸ್ತಕ ಬರೆದು ಪ್ರಕಟ ಮಾಡುವಂತಾಗಲಿ, ಈ ಮತಪೆಟ್ಟಿಗೆ ಎಲ್ಲರ ಮನೆ ಮತ್ತು ಮನಗಳಲ್ಲಿ ಇರುವಂತಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ದ.ಕ ರೆಡ್‍ಕ್ರಾಸ್ ಸೊಸೈಟಿಯ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ , ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಪ್ರಕಾಶಕರಾದ ಕಲ್ಲೂರು ನಾಗೇಶ್, ಕೃತಿಕಾರರಾದ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.

Related Posts

Leave a Reply

Your email address will not be published.