ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ
ಬೆಂಗಳೂರು: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಉಮೇಶ್ ಕತ್ತಿಯವರು ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ದಿನ ಪೂರ್ತಿ ಚೆನ್ನಾಗಿಯೇ ಇದ್ದ ಉಮೇಶ್ ಕತ್ತಿ, ಬೆಂಗಳೂರಿನ ಡಾಲರ್ಸ್ ಕಾಲನಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದಿದ್ದರು. ಆದರೆ ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಅಲ್ಲಿಯೇ ಹತ್ತಿರದಲ್ಲಿದ್ದ ಎಂಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಕೂಡಲೇ ಅವರನ್ನು ಪರೀಕ್ಷಿಸಿದ ವೈದ್ಯರು , ಸದ್ಯ ತುರ್ತು ನಿಗಾ ಘಟಕಕ್ಕೆ ದಾಖಲಿಸಿ, ಚಿಕಿತ್ಸೆ ನೀಡಿದ್ದರು.
ತಡರಾತ್ರಿ ಹೃದಯಾಘಾತದಿಂದ ಸಂಭವಿಸಿದ ಹಿನ್ನೆಲೆಯಲ್ಲಿ ಸಚಿವ ಉಮೇಶ್ ಕತ್ತಿ ಅವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಮುಖ್ಯಮಂತ್ರಿ ಅವರು ತಡರಾತ್ರಿ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಹೃದಯಾಘಾತದಿಂದ ನಿಧನರಾದ ಆಹಾರ ಸಚಿವ ಉಮೇಶ್ ಕತ್ತಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭಲ್ಲಿ ಸಚಿವರಾದ ಶ್ರೀ ಅಶ್ವತ್ಥನಾರಾಯಣ, ಶ್ರೀ ಗೋವಿಂದ ಕಾರಜೋಳ, ಶ್ರೀ ಮುನಿರತ್ನ, ಡಾ.ಕೆ ಸುಧಾಕರ್, ಸಿಸಿ ಪಾಟೀಲ್, ಶಾಸಕರಾದ ಅರವಿಂದ್ ಬೆಲ್ಲದ, ಮಾಜಿ ಸಚಿವ ಲಕ್ಷ್ಮಣ ಸವದಿ ಉಪಸ್ಥಿತರಿದ್ದರು..