ಆಟಿಯ ನೈಜ ಅರ್ಥ ತಿಳಿಯುವ ಕೆಲಸ ನಡೆಯಬೇಕು: ಆತ್ರಾಡಿ ಅಮೃತ ಶೆಟ್ಟಿ

ಮಂಗಳೂರು: ಆಟಿಯೆಂದರೆ ಹತ್ತಾರು ಬಗೆಯ ತಿಂಡಿಗಳನ್ನು ತಯಾರಿಸಿ ಸವಿಯುವುದಷ್ಟೇ ಅಲ್ಲ, ಬದಲಾಗಿ ಆಟಿಯ ನೈಜ ಮಹತ್ವ ಹಾಗೂ ನಿಜವಾದ ರೂಪದಲ್ಲಿ ಅರ್ಥ ತಿಳಿಯುವ ಕೆಲಸ ನಡೆಯಬೇಕು ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್ ಸದಸ್ಯೆ ಆತ್ರಾಡಿ ಅಮೃತಾ ಶೆಟ್ಟಿ ಹೇಳಿದರು.
ಅವರು ಭಾನುವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮಹಿಳಾ ಘಟಕ ಉರ್ವದ ತುಳು ಭವನದಲ್ಲಿ ಆಯೋಜಿಸಿದ್ದ ಆಟಿದ ಗೇನ ಕಾರ್ಯಕ್ರಮದಲ್ಲಿ ಆಟಿಯ ಕುರಿತು ಮಾತನಾಡಿದರು.


ಆಟಿ ತಿಂಗಳ ಸಮಸ್ಯೆಗಳ ಬಗ್ಗೆ ತಿಳಿಯಬೇಕು, ಈಗ ಆ ರೀತಿಯ ಸಮಸ್ಯೆಗಳಿಲ್ಲ ಆದರೆ ಮುಂದಿನ ಪೀಳಿಗೆಗೆ ಅದರ ಅರಿವು ಇರಬೇಕು, ಆಟಿ ಕಷಾಯ ಕುಡಿಯುವ ಕಾರಣ ಮತ್ತು ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ಆಟಿ ಎಂದರೆ ಅನಿಷ್ಟ ಅಲ್ಲ. ಒಳ್ಳೆಯ, ಸುಖದ ತಿಂಗಳು. ತುಳುವ ಹೆಣ್ಣಿನ ತಾಕತ್ತು ಮತ್ತು ಮನೆ ಸಂಸಾರ ನಿಭಾಯಿಸಯವ ಶಕ್ತಿ ನಿರೂಪಣೆಯ ಹಾಗೂ ಸಾಬೀತುಪಡಿಸುವ ಸಮಯವಾಗಿದೆ. ಮನೆಯವರಿಗೂ ಬಂದವರಿಗೂ ಹೊಟ್ಟೆ ತುಂಬಿಸುವ ಆಕೆಯ ಕಾಳಜಿ ಮತ್ತು ಬದುಕಿನ ಮೌಲ್ಯ ತಿಳಿದುಕೊಳ್ಳಬೇಕು ಎಂದರು.
ಮಳೆಗಾಲದಲ್ಲಿ ತಿನ್ನುವ ಆಹಾರವೆಲ್ಲವೂ ಹಸಿವಿಗೆ ಹೊರತು ನಾಲಗೆ ರುಚಿಗಲ್ಲ. ಆಟಿ ಕಷಾಯ ಹಿಂದಿನವರಿಗೆ ಬದುಕಿನ ಭಾಗವಾಗಿತ್ತು, ಈಗ ಸೋಷಿಯಲ್ ಮೀಡಿಯಾ ಮಿಂಚಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಆಟಿಯಲ್ಲಿ ಕೇವಲ ಗದ್ದೆಯ ಕೆಸರಿನಲ್ಲಿ ಆಡುವುದಷ್ಟೇ ಸೀಮಿತವಾಗದೆ, ವರ್ಷದಲ್ಲಿ ಒಂದು ಬಾರಿಯಾದರೂ ಭತ್ತ ಬೆಳೆಸುವ ಉಮೇದನ್ನು ಬೆಳೆಸಿಕೊಳ್ಳೋಣ, ಹಡಿಲು ಬಿದ್ದ ಗದ್ದೆಯಲ್ಲಿ ಮತ್ತೆ ಬೆಳೆ ಮಾಡುವುದರತ್ತ ಚಿತ್ತ ಹರಿಸಬೇಕಿದೆ ಎಂದರು.
ಎಜೆ ಆಸ್ಪತ್ರೆಯ ಫಿಸಿಯಾಲಜಿ ವಿಭಾಗದ ಡಾ.ಕಲ್ಪನಾ ಅಶ್ಫಕ್ ಕಾರ್ಯಕ್ರಮ ಉದ್ಘಾಟಿಸಿದರು. ಮುಂಡಾಲ ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಕಾಪಿಕಾಡ್ ಮಲಾರ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲ ಎಸ್. ಪೊಳಲಿ ಗ್ರಾ.ಪಂ.ಪಿಡಿಒ ವಸಂತಿ ಜಯಪ್ರಕಾಶ್ , ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಪವಿತ್ರಾ ಕೆ,ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಚೇತನಾ ರೋಹಿತ್ ಉಳ್ಳಾಲ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಕವಿತಾ ಶೈಲೇಶ್, ಶಿಕ್ಷಕಿ ಮಲ್ಲಿಕಾ ರಘುರಾಜ್ , ವೀಣಾ ಶ್ರೀನಿವಾಸ್, ಹರೀಶ್ ಕೊಡಿಯಾಲ್ ಬೈಲ್, ಕಿರಣ್ , ರಘುರಾಜ್ ಕದ್ರಿ, ರಜನೀಶ್ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು,ಮಹಿಳಾ ಸಂಚಾಲಕಿ ಶೋಭಾ ಸ್ವಾಗತಿಸಿದರು, ಸುಪ್ರೀತಾ ವಂದಿಸಿದರು

Related Posts

Leave a Reply

Your email address will not be published.