ಯಕ್ಷಸಂಭ್ರಮ: ರೆಂಜಾಳ ರಾಮಕೃಷ್ಣ ರಾವ್, ಪೆರುವಾಯಿ ನಾರಾಯಣ ಶೆಟ್ಟಿಗೆ ‘ಯಕ್ಷದೇವ’ ಪ್ರಶಸ್ತಿ  

ಮೂಡುಬಿದಿರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ವತಿಯಿಂದ 26ನೇ ವರ್ಷದ ಯಕ್ಷಸಂಭ್ರಮ-2023ರ ಕಾಯಕ್ರಮ ಜುಲೈ 30 ರಂದು ಕನ್ನಡ ಭವನದಲ್ಲಿ ದಿನಪೂರ್ತಿ ನಡೆಯಲಿದೆ ಎಂದು ಯಕ್ಷದೇವ ಮಿತ್ರಕಲಾ ಮಂಡಳಿಯ ಸ್ಥಾಪಕ ಅಧ್ಯಕ್ಷ ಎಂ.ದೇವಾನಂದ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ವೇಷಧಾರಿಗಳಾದ ರೆಂಜಾಳ ರಾಮಕೃಷ್ಣ ರಾವ್ ಮತ್ತು ಪೆರುವಾಯಿ ನಾರಾಯಣ ಶೆಟ್ಟಿ ಅವರಿಗೆ ತಲಾ 10 ಸಾವಿರ ರೂ.ನಗದಿನೊಂದಿಗೆ ‘ಯಕ್ಷದೇವ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಯಕ್ಷಗಾನದ ಸರ್ವ ಆಯಾಮಗಳ ಬೃಹತ್ ಸಂಕಲನವನ್ನೊಳಗೊಂಡ ಯಕ್ಷಸಂಭ್ರಮ ಇದಾಗಿದೆ. ಬೆಳಗ್ಗೆ 8.30ಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್ ಯಕ್ಷಸಂಭ್ರಮವನ್ನು ಉದ್ಘಾಟಿಸುವರು. ಜಾನಪದ ವಿದ್ವಾಂಸ ಡಾ.ವೈ.ಎನ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಅರ್ಚಕ ಕೃಷ್ಣ ತಂತ್ರಿ ಆಶೀರ್ವಚನ ನೀಡುವರು ಎಂದರು.

ಸಾಯಂಕಾಲ 4.30ಕ್ಕೆ ಎಂಆರ್‌ಪಿಎಲ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಬಿ.ಎಚ್.ವಿ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಯಕ್ಷದೇವ ಪ್ರಶಸ್ತಿ ಪ್ರದಾನ ಮಾಡುವರು. ಶಾಂತಾರಾಮ ಕುಡ್ವ ಅಭಿನಂದನಾ ಮಾತುಗಳನ್ನಾಡುವರು. ‘ದಿ.ಶ್ರೀಮತಿ ವನಜಾಕ್ಷಿ ಅಮ್ಮ ಸಂಸ್ಮರಣೆ’ ಕಾರ್ಯಕ್ರಮದಲ್ಲಿ ರಂಜಿತಾ ಎಲ್ಲೂರು ಅವರನ್ನು ಸನ್ಮಾನಿಸಲಾಗುವುದು.

ಶಾಸಕ ಉಮಾನಾಥ ಕೋಟ್ಯಾನ್, ವೇದಮೂರ್ತಿ ಗೋವಿಂದ ಭಟ್, ಎಸ್‌ಕೆಎಫ್‌ನ ಆಡಳಿತ ನಿರ್ದೇಶಕ ರಾಮಕೃಷ್ಣ ಆಚಾರ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಡಾ.ವೈ.ಸುದರ್ಶನ್ ರಾವ್ ಉಡುಪಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಹನುಮಗಿರಿ ಮೇಳದ ವ್ಯವಸ್ಥಾಪಕ ದಿವಾಕರ ಕಾರಂತ್, ಉಪನ್ಯಾಸಕ ಯೋಗೀಶ್ ಕೈರೋಡಿ ಭಾಗವಹಿಸಲಿದ್ದಾರೆ ಎಂದರು.

ಯಕ್ಷಗಾನ, ಗಾನವೈಭವ ಬೆಳಗ್ಗೆ 9.15ರಿಂದ ಶ್ರೀ ಯಕ್ಷದೇವ ಸಾಧನ ಕೇಂದ್ರದ ವಿದ್ಯಾರ್ಥಿಗಳಿಂದ ‘ಕೃಷ್ಣಲೀಲೆ-ಕಂಸವಧೆ’ ಯಕ್ಷಗಾನ, 10.45ರಿಂದ ಯಕ್ಷಗಾನ ಗಾನವೈಭವ, 12ರಿಂದ ‘ನಚಿಕೇತೋಪಾಖ್ಯಾನ’ ತಾಳಮದ್ದಳೆ, ಮಧ್ಯಾಹ್ನ 2ರಿಂದ ಎನ್.ಎಂ.ಎ.ಎA ಐ.ಟಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳಿಂದ ‘ಶರಣಸೇವಾ ರತ್ನ’ ಯಕ್ಷಗಾನ, 3.15ರಿಂದ ನಾಟ್ಯವೈಭವ, ಸಾಯಂಕಾಲ 6.15ಕ್ಕೆ ಹಾಸ್ಯ ವೈಭವ ಕಾರ್ಯಕ್ರಮಗಳು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಯಕ್ಷದೇವ ಮಿತ್ರಕಲಾ ಮಂಡಳಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.