ಯಕ್ಷಸುಮ ತೋನ್ಸೆ ಜಯಂತ್ ಕುಮಾರ್ ಸ್ವರ್ಗಸ್ಥ

ಉಡುಪಿ : ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ಪ್ರತಿಭಾನ್ವಿತ ಕಲಾವಿದರಾಗಿ ಸಾಕಷ್ಟು ಸಾಧನೆಗಳೊಂದಿಗೆ ಪ್ರಸಿದ್ದರಾಗಿದ್ದ, ತೋನ್ಸೆ ಜಯಂತ್ ಕುಮಾರ್ (77) ಇಂದು ಬೆಳಗಿನ ಜಾವ ಸ್ವರ್ಗಸ್ಥರಾಗಿದ್ದಾರೆ. ಇವರು ಯಕ್ಷಗಾನದ ಸಾಂಪ್ರದಾಯಿಕ ಮೌಲ್ಯಗಳ ಉಳಿಯುವಿಕೆಗೆ ಸಮಗ್ರವಾಗಿ ಶ್ರಮಿಸಿದ್ದು ಯಕ್ಷಗುರುಗಣ್ಯರಾಗಿ ಗೌರವಾಭಿಮಾನಗಳಿಂದ ಗುರುತಿಸಿಕೊಂಡಿದ್ದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ಯಕ್ಷಗಾನ ಭಂಡಾರ ತೋನ್ಸೆ ಕಾಂತಪ್ಪ ಮಾಸ್ಟರ್ ‌ರವರ ಸುಪುತ್ರರಾಗಿ ಬಾಲ್ಯದಿಂದಲೂ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡು ಪ್ರಸ್ತುತ ದಿನಮಾನದವರೆಗೂ ರಂಗಸ್ಥಳದಲ್ಲಿ ಅದಮ್ಯ ಉತ್ಸಾಹದಿಂದ ಪಾಲ್ಗೊಳ್ಳಲು ಬಯಸುವವರಾಗಿದ್ದರು.‌ ಕಲೆಯನ್ನು ಸಮರ್ಪಣಾಭಾವದ ಸೇವೆಯಾಗಿ ಸ್ವೀಕರಿಸಿದವರು, ಸಹೃದಯಿ ಗುಣವಂತಿಕೆಯವರು, ತಾಳ್ಮೆಯ ಮನೋಭಾವದವರು, ವಿಶ್ವಾಸ, ನಂಬಿಕೆಯ ಪ್ರೀತಿಪಾತ್ರರು, ಹೀಗೆ ಬಹುಪ್ರಶಂಸನೀಯ ಸಂಗತಿಗಳಿಗೆ ಸ್ಪಷ್ಟ ಸಾಕ್ಷಿಯಾಗಿದ್ದವರು ತೋನ್ಸೆ ಜಯಂತ್ ಕುಮಾರ್. ಪ್ರತಿಷ್ಠಿತ ಯಕ್ಷಗಾನ ಪುರಸ್ಕಾರಗಳಿಗೆ ಅರ್ಹರಾಗಿದ್ದ ಇವರು, ರಾಷ್ಟ್ರಪತಿ ಗೌರವ ಸ್ವೀಕಾರ, ಅಕಾಡೆಮಿ ಪ್ರಶಸ್ತಿ, ಯಕ್ಷಸುಮ ಪ್ರಶಸ್ತಿ, ಕಾಳಿಂಗ ನಾವುಡ ಪ್ರಶಸ್ತಿ, ಶಿಷ್ಯವೃಂದದ ನಿರಂತರ ಗೌರವಾರ್ಪಣೆಯ ಜೊತೆಗೆ ಬಹುಸಂಖ್ಯೆಯ ಅಭಿಮಾನಿ ಬಳಗದಿಂದ ಸವ್ಯಸಾಚಿಯೆಂದೆ ಪರಿಗಣಿತರಾಗಿದ್ದರು.

ಮೃತರ ದಿವ್ಯಾತ್ಮಕ್ಕೆ ಸದ್ಗತಿಯ ಪ್ರಾರ್ಥನೆಯನ್ನು ಕೋರಿ ಜೂನ್ 27 ರಂದು ಉಡುಪಿಯ ಸಂತೆಕಟ್ಟೆ ಗೋಪಾಲಪುರದಲ್ಲಿರುವ ಇವರ ಮನೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಸಕಲ ಗೌರವಾರ್ಪಣೆಯೊಂದಿಗೆ ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರವು ನೆರವೇರಲಿದೆ.

Related Posts

Leave a Reply

Your email address will not be published.