ಜೋಕಟ್ಟೆಯವರ 40ನೇ ಕೃತಿ ಲೇಖನಗಳ ಸಂಕಲನ ‘ಎಲ್ಲಿಗೋ ಪಯಣ ಯಾವುದೋ ದಾರಿ’ ಬಿಡುಗಡೆ
ಮಂಗಳೂರು: ನಗರದ ಉರ್ವಸ್ಟೋರ್‌ನಲ್ಲಿರುವ ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ನ ಭಾಷಾ ಸಂಘದ ಸಹಯೋಗದಲ್ಲಿ ಸ್ವಸ್ತಿಕದಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಕವಿ, ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯವರ 40ನೇ ಕೃತಿ ಲೇಖನಗಳ ಸಂಕಲನ ‘ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ’ ಹಾಗೂ 41ನೇ ಕೃತಿ ಲೇಖನಗಳ ಸಂಕಲನ ‘ಎಲ್ಲಿಗೋ ಪಯಣ ಯಾವುದೋ ದಾರಿ’ ಬಿಡುಗಡೆಗೊಂಡಿತು.
‘ದೇವರುಗಳ ನ್ಯಾಯಾಲಯ ಮತ್ತು ಸ್ಮಶಾನದಲ್ಲಿ ನೃತ್ಯ’ ಕೃತಿಯನ್ನು ಬಿಡುಗಡೆಗೊಳಿಸಿದ ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್, ವಿದ್ಯಾರ್ಥಿಗಳು ಬರೇ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಜೋಕಟ್ಟೆ ಮತ್ತು ತನ್ನ ಒಡನಾಟವನ್ನು ಸ್ಮರಿಸಿದ ಅವರು, ಮುಂಬೈಯಲ್ಲಿ ಪತ್ರಿಕೋದ್ಯಮ ಜೀವನದ ಅನುಭವವನ್ನು ವಿದ್ಯಾರ್ಥಿಗಳ ಮುಂದಿಟ್ಟು, ಕಲಿಕೆಯೊಂದಿಗೆ ಗಳಿಕೆ ಎಂಬ ಪರಿಕಲ್ಪನೆಯಲ್ಲಿ ಮುನ್ನಡೆಯುತ್ತಿರುವ ಸ್ವಸ್ವಿಕ ಕಾಲೇಜು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
‘ಎಲ್ಲಿಗೋ ಪಯಣ ಯಾವುದೋ ದಾರಿ’ ಕೃತಿ ಬಿಡುಗಡೆಗೊಳಿಸಿದ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನಲ್ಲಿ ಹೆಚ್ಚೆಚ್ಚು ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕಾಲೇಜಿನಲ್ಲಿ ನಡೆದ ಈ ಕೃತಿ ಬಿಡುಗಡೆ ಸಮಾರಂಭ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರೇಮ ಬೆಳೆಸುವಲ್ಲಿ ಪೂರಕವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಮಾಲಿನಿ ಎನ್. ಹೆಬ್ಬಾರ್, ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಕಲಿಕೆಯೊಂದನ್ನು ನೆಚ್ಚಿಕೊಂಡರೆ ಸಾಲದು, ನಿರಂತರ ಓದುವಿಕೆ ಮುಖ್ಯ. ಇದರಿಂದ ನಮ್ಮ ಸುತ್ತಮುತ್ತ ನಡೆಯುವ ದಿನನಿತ್ಯದ ಆಗುಹೋಗುಗಳನ್ನು ತಿಳಿಯಲು ಸಾಧ್ಯ ಎಂದು ಹೇಳಿದರು.
ಸಾಹಿತಿ, ಕೃತಿಕಾರ ಶ್ರೀನಿವಾಸ ಜೋಕಟ್ಟೆ ಪ್ರಸ್ತಾವಿಕವಾಗಿ ಮಾತನಾಡಿ, ಪ್ರವಾಸ ಸಾಹಿತ್ಯದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಭಾಷಾ ಸಂಘದ ಸಂಯೋಜಕಿ ಪೂರ್ಣಿಮಾ ಕುಮಾರಿ ಬಿ. ಅತಿಥಿಯಾಗಿದ್ದರು. ಇದೇ ಸಂದರ್ಭ ವಿದ್ಯಾರ್ಥಿನಿ ಪ್ರಕೃತಿ ಸ್ವರಚಿತ ಕವನ ವಾಚಿಸಿದರು.ಸಾಹಿತಿ, ಉಪನ್ಯಾಸಕಿ ಡಾ. ನಾಗವೇಣಿ ಮಂಚಿ, ಮಂಗಳಾ ಪತ್ರಿಕೆಯ ಟಿ. ಕೆ. ಸುನಿಲ್, ವಿದ್ಯಾರ್ಥಿ ಸಂಯೋಜಕಿ ಕವಿತಾ,ಆನಂದ್ ರಾವ್ ಜೋಕಟ್ಟೆ, ವಿ ಟೆಕ್ ಕಂಪ್ಯೂಟರ್ ನ ಗಣೇಶ ಉಡುಪ…. ಮೊದಲಾದವರಿದ್ದರು. ಈ ಸಂದರ್ಭದಲ್ಲಿ 2020 ರ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪಡೆದಿರುವ ಸಂಯುಕ್ತ ಕರ್ನಾಟಕ ದೈನಿಕದ ಮಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕ ರಾಮಕೃಷ್ಣ ಆರ್ ಅವರನ್ನು ವೇದಿಕೆಯ ಗಣ್ಯರು ಶಾಲು ಹೊದೆಸಿ ಗೌರವಿಸಿದರು. ವಿದ್ಯಾರ್ಥಿಗಳಾದ ಕಾವೇರಿ ಸ್ವಾಗತಿಸಿ, ಸಾವಿತ್ರಿ ವಂದಿಸಿದರು. ಭುವನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.