ಉರ್ ದ ಮಾರಿ ಗಿಡಪೆರೆ ಬತ್ತೆ ಆಟಿ ಕಳಂಜೆ

ತುಳುನಾಡಿನಲ್ಲಿ ಆಷಾಢ ಮಾಸದಲ್ಲಿ ಆಟಿ ಕಳೆಂಜ ವೇಷ ಹಾಕುವ ಸಂಪ್ರದಾಯ ಈಗಲೂ ರೂಢಿಯಲ್ಲಿದೆ. ಆಟಿ ಕಳೆಂಜದ ವೇಷ ಹಾಕಿ ಮನೆ ಮನೆಗೆ ಹೋಗುವುದರಿಂದ ಮನೆಯನ್ನು ಸೇರಿಕೊಂಡಿರುವ ಮಾರಿ ಓಡಿ ಹೋಗುತ್ತದೆ ಎಂಬ ನಂಬಿಕೆ ಇದೆ. ಇಂತಹದೊಂದು ಸಾಂಪ್ರದಾಯಿಕ ಪದ್ಧತಿ ಮಂಗಳೂರಿನ ಸುಂಕದಕಟ್ಟೆಯ ಪರಿಸರದಲ್ಲಿ ರಾಮಸೇನಾ ನೇತೃತ್ವದಲ್ಲಿ ನಡೆಯಿತು.

ತುಳುನಾಡು ಹಲವಾರು ಜನಪದ ಆಚರಣೆಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಅಂತಹ ಆಚರಣೆಗಳಲ್ಲಿ ಆಟಿ ಕಳೆಂಜವೂ ಒಂದು. ಆಷಾಢ ಮಾಸದಲ್ಲಿ ವಾತಾವರಣ ಮತ್ತು ಪ್ರಕೃತಿಯಲ್ಲಾಗುವ ಬದಲಾವಣೆಯ ಸಂಕೇತವಾಗಿ ಹುಟ್ಟಿಕೊಂಡ ನಂಬಿಕೆ ‘ಆಟಿ ಕಳೆಂಜ’. ‘ಆಟಿ’ ಅಂದರೆ ಆಷಾಢ. ‘ಕಳೆಂಜ’ ಅಂದರೆ ಕಳೆಯುವವನು ಎಂದರ್ಥ. ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂಬರ್ಥವೂ ಇದೆ.

ಆಷಾಢ ಮಾಸದಲ್ಲಿ ಕರಾವಳಿಯಲ್ಲಿ ಯಾವುದೇ ಹಬ್ಬ, ಶುಭ ಕಾರ್ಯ ಹಮ್ಮಿಕೊಳ್ಳುವುದಿಲ್ಲ. ಕ್ಷಾಮ, ಕಷ್ಟ ಈ ತಿಂಗಳಲ್ಲಿ ಹೆಚ್ಚು. ದೇವಾಲಯಗಳಲ್ಲಿ ಆರಾಧನೆ ನಡೆಯುವುದಿಲ್ಲ. ಆದರೆ ನಾಡಿಗೆ ಬರುವ ಕಷ್ಟಗಳನ್ನು ದೂರ ಮಾಡಲು ದೈವಗಳು ಮನೆ ಮನೆಗಳಿಗೆ ಭೇಟಿ ನೀಡುತ್ತವೆ. ಆದರೆ ಗ್ರಾಮೀಣ ಜನರಿಗೆ ಪರಿಚಿತ ಆಟಿ ಕಳೆಂಜ. ದುಷ್ಟ ಶಕ್ತಿಯನ್ನು ಹೋಗಲಾಡಿಸುವ ಆಶಯವನ್ನು ಈ ಆಟಿ ಕಳೆಂಜ ನೃತ್ಯದ ಮೂಲಕ ಪಾಡ್ದನ ಹೇಳುತ್ತಾ ಪ್ರಸ್ತುತ ಪಡಿಸುತ್ತಾರೆ. ಈ ಸಾಂಪ್ರದಾಯಿಕ ನೃತ್ಯವನ್ನು ನಲಿಕೆ ಸಮುದಾಯದವರು ಮಾಡುತ್ತಾರೆ. ಅವರು ಆಟಿ ಕಳೆಂಜ ವೇಷ ಹಾಕಿ ಮನೆಮನೆಗೆ ಹೋಗುವುದರಿಂದ ಮನೆಯನ್ನು ಸೇರಿಕೊಂಡಿರುವ ಮಾರಿ ಓಡಿ ಹೋಗುತ್ತದೆ ಎಂಬ ನಂಬಿಕೆ ಇವತ್ತಿಗೂ ಚಾಲ್ತಿಯಲ್ಲಿದೆ.

ಗ್ರಾಮೀಣ ಪ್ರದೇಶದಲ್ಲಿ ಆಟಿ ಕಳೆಂಜ ಇಂದಿಗೂ ಜನಜನಿತವಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ಇದು ಬಹಳ ವಿರಳ. ಇಂತಹ ಒಂದು ಸಂಪ್ರದಾಯವನ್ನು ಸುಂಕದ ಕಟ್ಟೆಯ ಯುವಕರ ತಂಡ ನಗರ ಪ್ರದೇಶಕ್ಕೂ ಪಸರಿಸುವ ಕೆಲಸ ಮಾಡುತ್ತಿದೆ. ಸುಂಕದ ಕಟ್ಟೆಯ ರಾಮಸೇನಾ ಅಧ್ಯಕ್ಷ ಕಿರಣ್ ಆಮೀನ್, ಕಲಾವಿದ ಬೋಜ ಕುತ್ತಾರ್ ನೇತೃತ್ವದಲ್ಲಿ ಆಟಿ ಕಳೆಂಜದ ಕುಣಿತ ನಡೆಯಿತು.

ತುಳುನಾಡಿನ ಜನಪದೀಯಗಳಲ್ಲಿ ಒಂದಾದ ಆಟಿ ಕಳೆಂಜವನ್ನು ನಗರ ಪ್ರದೇಶಕ್ಕೆ ಪಸರಿಸುವ ರಾಮಸೇನಾ ತಂಡದ ಕಾರ್ಯ ಶ್ಲಾಘನೀಯ. ಈ ಮೂಲಕವಾದರೂ ತುಳುನಾಡಿನ ಆಚಾರ ವಿಚಾರ ಅಚ್ಚಳಿಯದೆ ಉಳಿದಂತಾಗಿದೆ.

Related Posts

Leave a Reply

Your email address will not be published.