ದೇವಸ್ಥಾನ ತೆರವು: ನಾಟಕ ನಿಲ್ಲಿಸಿ ಬಿಜೆಪಿ ಸರ್ಕಾರ ಜನರಲ್ಲಿ ಕ್ಷಮೆ ಯಾಚಿಸಬೇಕು: ಹರೀಶ್ ಕುಮಾರ್
ದೇವರು, ಜಾತಿ,ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿದೆ. ಇದರಿಂದ ಜನರ ಮುಂದೆ ಬಿಜೆಪಿಯವರ ಬಣ್ಣ ಬಯಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಧರ್ಮದ ರಕ್ಷಕರು, ಹಿಂದೂ ರಕ್ಷಕರು, ಹಿಂದೂಗಳನ್ನು ಗುತ್ತಿಗೆಗೆ ತೆಗೆದುಕೊಂಡವರು, ಹಿಂದೂಗಳ ಮತ ಪಡೆದು ಸರ್ಕಾರ ರಚಿಸಿದವರು ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ದೇವಸ್ಥಾನಗಳ ಗೋಪುರವನ್ನು ಒಡೆದು ದೇವರ ಮೂರ್ತಿಗಳು ಅನಾಥವಾಗಿ ಬಿದ್ದಿರುವುದು ನೋಡಿದರೆ ಮನಕಲುಕುತ್ತದೆ. ಬಿಜೆಪಿಯವರು ನಾಟಕ ಮಾಡುವುದನ್ನು ನಿಲ್ಲಿಸಿ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ನೀರಜ್ಪಾಲ್, ದ.ಕ.ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ್ದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್ ಉಪಸ್ಥಿತರಿದ್ದರು.


















