ಪುತ್ತೂರು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಅಂಕಿ-ಅಂಶಗಳ ಕೈಪಿಡಿ ತಯಾರಿ: ಸಂಧ್ಯಾ ಕೆ.ಎಸ್

ಸಾಂಖ್ಯಿಕ ಇಲಾಖೆಯ ಸಹಯೋಗದಲ್ಲಿ ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲಿ “ಜಿಲ್ಲಾ ಅಂಕಿ-ಅಂಶಗಳ ನೋಟ” ಪ್ರಕಟಣೆಯ ಮಾದರಿಯಲ್ಲಿ ಜಿಲ್ಲೆಗೆ ಒಂದರಂತೆ “ತಾಲೂಕು ಅಂಕಿ-ಅಂಶಗಳ ನೋಟ” ಹೊರತರಲು ಪ್ರಥಮವಾಗಿ ಪುತ್ತೂರು ತಾಲೂಕನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ.ಜಿ.ಪಂ.ನ ಯೋಜನಾಧಿಕಾರಿ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಸಂಧ್ಯಾ ಕೆ.ಎಸ್. ಅವರು ಹೇಳಿದರು.

ಅವರು ಆ.2 ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ.ಜಿ.ಪಂ. ಸಹಯೋಗದಲ್ಲಿ ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಡೆದ “2024-25 ನೇ ಸಾಲಿನ ತಾಲೂಕು ಅಂಕಿ ಅಂಶಗಳ ಸಂಗ್ರಹ ಕಾರ್ಯಾಗಾರ”ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುತ್ತೂರು ತಾಲೂಕು ಈಗಾಗಲೇ ಪ್ರಗತಿಯನ್ನು ಹೊಂದುತ್ತಿದೆ. ಇದಕ್ಕೆ ಪೂರಕವಾಗಿ ಕಂದಾಯ ಇಲಾಖೆ, ನಗರ ಸಭೆ, ವಿವಿಧ ಇಲಾಖೆಗಳಿಂದ, ಗ್ರಾಮ ಪಂಚಾಯತ್ ಗಳಿಂದ 15 ಕೋಷ್ಠಕಗಳು, 76 ಟೇಬಲ್ ಗಳಲ್ಲಿ, 900 ಕ್ಕೂ ಹೆಚ್ಚು ಸೂಚಗಳನ್ನು ಒಳಗೊಂಡ ವಿಸ್ತ್ರತ ತಾಲೂಕಿನ ಅಂಕಿ ಅಂಶಗಳ ಸಂಗ್ರಹ ಇದಾಗಿರಲಿದೆ ಎಂದು ಹೇಳಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಶ್ರೀಧರ್ ಅವರು ಅಂಕಿ-ಅಂಶಗಳ ಸಂಗ್ರದ ಕುರಿತು ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು.
ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಸಹಾಯಕ ಲೆಕ್ಕಾಧಿಕಾರಿ ರವಿಚಂದ್ರ ಯು. ವಂದಿಸಿದರು.
ಸಹಾಯಕ ನಿರ್ದೇಶಕರು (ಪ.ರಾ.), ತಾಲೂಕು ಯೋಜನಾಧಿಕಾರಿ ನಾಗೇಶ್ ಎಂ. ಕಾರ್ಯಕ್ರಮ ನಿರ್ವಹಿಸಿದರು.