ಬೈಂದೂರು : ಹಳ್ಳಿಹೊಳೆ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ನೂತನ ಕಟ್ಟಡ, ಸಭಾಭವನ ಉದ್ಘಾಟನಾ
ಕುಂದಾಪುರ :ಉಡುಪಿ ಜಿ.ಪಂ., ಬೈಂದೂರು ತಾ.ಪಂ. ಹಾಗೂ ಹಳ್ಳಿಹೊಳೆ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಹಳ್ಳಿಹೊಳೆ ಗ್ರಾ.ಪಂ.ನ ನೂತನ ಕಟ್ಟಡ, ಸಭಾಭವನ, ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ, ಅರಿವು ಕೇಂದ್ರದ ಕಚೇರಿ ಉದ್ಘಾಟನಾ ಸಮಾರಂಭ ಸೋಮವಾರ ಸಂಭ್ರಮದಲ್ಲಿ ನಡೆಯಿತು.

ಕಮಲಶಿಲೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಮಾತನಾಡಿ, ಇದು ಊರಿನ ಒಳ್ಳೆಯ ಕಾರ್ಯ. ಹಳ್ಳಿಹೊಳೆ ಒಳ್ಳೆಯ ಪಂಚಾಯತ್ ಆಗಿ ಮೂಡಿ ಬರುತ್ತಿದ್ದು, ಎಲ್ಲರ ಸಂಘನಾತ್ಮಕ ಕೆಲಸದಿಂದ ಇದು ಸಾಧ್ಯವಾಗುತ್ತಿದೆ. ಜನರಿಗೆ ಇನ್ನಷ್ಟು ಕೆಲಸ ಮಾಡುವ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪಕ್ಷ ರಹಿತವಾಗಿ ಗ್ರಾಮದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದೀರಿ. ಇತ್ತೀಚಿನ ದಿನಗಳಲ್ಲಿ ಉತ್ತಮ ಪಂಚಾಯತ್ ಆಗಿ ರೂಪುಗೊಳ್ಳುತ್ತಿದ್ದು, ಯಾವುದೇ ಸರಕಾರವಿದ್ದರೂ, ಅಭಿವೃದ್ಧಿಗೆ ಸದಸ್ಯರೆಲ್ಲರೂ ಒಗ್ಗೂಡಿ ಪ್ರಯತ್ನಿಸುತ್ತಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಇನ್ನಷ್ಟು ಅನುದಾನಕ್ಕಾಗಿ ಪ್ರಯತ್ನಿಸಲಾಗುವುದು ಎಂದವರು ಭರವಸೆ ನೀಡಿದರು.
ಹಳ್ಳಿಹೊಳೆ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಶೆಟ್ಟಿ ಮಾತನಾಡಿ ಈ ಕಟ್ಟಡದ ಮೂಲಕ ಬಹು ವರ್ಷದ ಕನಸೊಂದು ಈಡೇರಿದೆ. ಸಣ್ಣ ಕಚೇರಿಯಿಂದ ತೊಂದರೆಯಾಗುತ್ತಿತ್ತು. ಈಗ ದೊಡ್ಡ ಕಚೇರಿಯಾಗಿದ್ದು, ಎಲ್ಲವೂ ಒಂದೇ ಸೂರಿನಡಿ ಬಂದಿರುವುದು ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಸದಸ್ಯರೆಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು .
ಬಿಸ್ಸೆನ್ನೆಲ್ ಬೈಂದೂರು ತಾಲೂಕು ನಿರ್ದೇಶಕರಾಗಿ ಆಯ್ಕೆಯಾದ ಗ್ರಾ.ಪಂ. ಸದಸ್ಯ ಪ್ರದೀಪ್ ಕೊಠಾರಿ, 10 ಮಂದಿ ಮಾಜಿ ಅಧ್ಯಕ್ಷರು, 4 ನಾಲ್ಕು ಸಾಧಕರು, ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಪ್ರಭಾಕರ ನಾಯ್ಕ್,ಪ್ರದೀಪ್ ಕೊಠಾರಿ, ನೇತ್ರಾವತಿ, ಸುಜಾತ, ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ. ಪಿಡಿಒ ಸುದರ್ಶನ್ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.


















