ಕಲೆಯ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಅಭಿರುಚಿ ಶ್ಲಾಘನೀಯ : ರಾಜೇಶ್ ಶೆಟ್ಟಿ
ಮಂಗಳೂರು : ವಿವಿಧ ಕಲಾ ಪ್ರಕಾರಗಳ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಭಾಷೆಯ ಬಗ್ಗೆ ಅಭಿರುಚಿ ಅಭಿಮಾನ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಕೆ.ಎಸ್.ಆರ್ .ಟಿ.ಸಿ. ಮಂಗಳೂರು ವಿಭಾಗೀಯ ನಿಯಂತ್ರಾಣಾಧಿಕಾರಿ ರಾಜೇಶ್ ಶೆಟ್ಟಿ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ತುಳುಭವನದಲ್ಲಿ ಹಮ್ಮಿಕೊಂಡ ‘ಜೋಕ್ಲೆ ಕಲಾ ಚಾತುರ್ಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಕಾಲೇಜು ಹಂತದಲ್ಲಿ ವಿವಿಧ ತುಳು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕ್ರತಿ ಬಗ್ಗೆ ವಿಚಾರಗಳನ್ನು ಯುವ ಜನತೆಗೆ ತಿಳಿಸಿಕೊಡಲು ಸಾಧ್ಯ, ಈ ನಿಟ್ಟಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕೆಲಸ ಅಭಿನಂದನೀಯ ಎಂದು ರಾಜೇಶ್ ಶೆಟ್ಟಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ವಹಿಸಿ,ಮಾತನಾಡಿ,ಅಕಾಡೆಮಿ ವತಿಯಿಂದ ತುಳುಭಾಷೆ ಉಳಿವಿಗಾಗಿ ವಿವಿಧ ಕಾರ್ಯಕ್ರಮವನ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕ ಪ್ರೊ.ಅಕ್ಷಯ ಕುಮಾರ್ , ಸರಕಾರಿ ವೆನ್ಲಾಕ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪದ್ಮನಾಭ ಅಮೀನ್, ಲಯನ್ಸ್ ಜಿಲ್ಲಾ ಸಂಯೋಜಕಿ ಆಶಾ ನಾಗರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅಕಾಡೆಮಿಯ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸದಸ್ಯ ಬೂಬ ಪುಜಾರಿ ಮಳಲಿ ಸ್ವಾಗತಿಸಿದರು, ಸದಸ್ಯ ಪಾಂಗಾಳ ಬಾಬು ಕೊರಗ ವಂದಿಸಿದರು.

ವಿದ್ಯಾರ್ಥಿಗಳಿಗಾಗಿ ತುಳು ಭಾಷಣ, ತುಳು ಜನಪದ ಕತೆ ಹೇಳುವುದು, ತುಳು ಭಾವಗೀತೆ, ತುಳು ಜನಪದ ನೃತ್ಯ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.


















