ವಿದೇಶದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಪ್ರದರ್ಶನ

ಯಕ್ಷಗಾನ ಇತಿಹಾಸದಲ್ಲೇ ಪರಿಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶಕ್ಕೆ ತೆರಳಿ ಯಕ್ಷಗಾನ ಪ್ರದರ್ಶನ ನೀಡಲು ಸಿದ್ಧವಾಗಿದೆ.
ತೆಂಕುತಿಟ್ಟಿನ ಪ್ರಸಿದ್ಧ ಶ್ರೀ ಗೆಜ್ಜೆಗಿರಿ ಮೇಳವು ಮಸ್ಕತ್ ಮತ್ತು ದುಬೈ ಯಲ್ಲಿ ಆದಿ ಮಾಯೆ ಪರಾಶಕ್ತಿ ಧೂಮಾವತಿ ಮತ್ತು ಮಾತೆ ದೇಯಿ ಬೈದೆತಿ ಅಮ್ಮನವರ ಬೆಳಕಿನ ಯಕ್ಷಗಾನ ಗೆಜ್ಜೆಸೇವೆ ನೀಡಲಿದ್ದು ಪೂರ್ಣ ಪ್ರಮಾಣದ ಮೇಳವೊಂದು ವಿದೇಶಿ ನೆಲದಲ್ಲಿ ಪ್ರದರ್ಶನ ನೀಡುತ್ತಿರುವುದು ಯಕ್ಷರಂಗದ ಇತಿಹಾಸದಲ್ಲಿ ಪ್ರಥಮವೆನಿಸಿದೆ.

ವಿದೇಶದ ನೆಲದಲ್ಲಿ:
ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಒಮಾನ್ ದೇಶದ ಮಸ್ಕತ್‍ನ ರೂವಿ ಅಲ್ ಫಲಾಜ್ ಹೋಟೆಲ್ ಗ್ರ್ಯಾಂಡ್ ಸಭಾಂಗಣದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಎ.19 ರಂದು 225ನೇ ಪ್ರಯೋಗ ಹಾಗೂ ಬಿಲ್ಲವ ಫ್ಯಾಮಿಲಿ ದುಬೈ ಕೂಟದ ವತಿಯಿಂದ ಬರ್ ದುಬೈಯ ಜದಫ್ ಸ್ವಿಸ್ ಇಂಟರ್ ನ್ಯಾಷನಲ್ ಸೈಂಟಿಫಿಕ್ ಸ್ಕೂಲ್ ನ ಹಾಲ್‍ನಲ್ಲಿ ಎ.20 ರಂದು 226ನೇ ಪ್ರಯೋಗದ ಯಕ್ಷಗಾನ ಪ್ರದರ್ಶನ ಕಾಣಲಿದೆ.

ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ:
ನಿತಿನ್ ತೆಂಕಕಾರಂದೂರು ವಿರಚಿತ, ಯೋಗೀಶ್ ಕುಮಾರ್ ಚಿಗುರುಪಾದೆ ಪದ್ಯ ರಚನೆಯ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಕಾರಣಿಕವನ್ನು ಸಾರುವ ಪೌರಾಣಿಕ ಯಕ್ಷಗಾನ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ವಿದೇಶದಲ್ಲಿ ಮಾಡುತ್ತಿರುವುದು ಕಲಾಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.

ಏನಿದು ಪರಿಪೂರ್ಣ ತಂಡ:
ಈಗಾಗಲೇ ವಿದೇಶದಲ್ಲಿ ಅನೇಕ ಯಕ್ಷಗಾನ ಪ್ರದರ್ಶನ ಕಂಡಿರಬಹುದು. ಬೇರೆ ಮೇಳಗಳ ಆಯ್ದ ಕಲಾವಿದರ ಒಗ್ಗೂಡುವಿಕೆಯೊಂದಿಗೆ ಯಕ್ಷಗಾನ ಪ್ರದರ್ಶನ ನಡೆದಿದೆ. ಆದರೆ ಒಂದು ಮೇಳ ಪೂರ್ಣ ಪ್ರಮಾಣದಲ್ಲಿ ಈ ತನಕ ಪಾಲ್ಗೊಂಡಿಲ್ಲ. ಗೆಜ್ಜೆಗಿರಿ ಮೇಳ ಮೊದಲ ಬಾರಿಗೆ ಎಂಬಂತೆ ಪೂರ್ಣ ತಂಡವಾಗಿ ತೆರಳುತ್ತಿದೆ. ಇಲ್ಲಿ ಆಯ್ದ ಕಲಾವಿದರು ಇಲ್ಲ. ಎಲ್ಲ ಕಲಾವಿದರೂ ಗೆಜ್ಜೆಗಿರಿ ಮೇಳದವರೇ. ಊರಿನಲ್ಲಿ ಯಕ್ಷಗಾನ ಆಗುವ ರೀತಿಯಲ್ಲೇ ವಿದೇಶಿ ನೆಲದಲ್ಲಿ ತ್ರಿಕಾಲಪೂಜೆ, ಚೌಕಿ ಪೂಜೆ ಸಹಿತ ರಂಗಸ್ಥಳ ನಿರ್ಮಿಸಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ ತಿರುಗಾಟದ ಇತಿಹಾಸದಲ್ಲೇ ಪರಿಪೂರ್ಣ ಮೇಳವೊಂದು ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಹೊಸ ಚಾರಿತ್ರಿಕ ದಾಖಲೆಯೊಂದಿಗೆ ಪ್ರದರ್ಶನಗೊಳ್ಳಲು ಸಜ್ಜಾಗಿರುವುದು ವಿಶೇಷ. ಕೋಟಿ-ಚೆನ್ನಯ, ದೇಯಿ ಬೈದೆತಿ ಮೂಲಸ್ಥಾನವಾಗಿರುವ ಗೆಜ್ಜೆಗಿರಿಯಲ್ಲಿ ಎರಡು ವರ್ಷದ ಹಿಂದೆ ಗೆಜ್ಜೆಗಿರಿ ಮೇಳ ಆರಂಭಗೊಂಡಿತ್ತು. ಈಗಾಗಲೇ 320 ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಲಾಗಿದೆ ಎನ್ನುತ್ತಾರೆ ಮೇಳದ ವ್ಯವಸ್ಥಾಪಕ ಪ್ರಶಾಂತ್ ಪೂಜಾರಿ.

ಯಕ್ಷಗಾನ ತಂಡ:
ವಿದೇಶಕ್ಕೆ ತೆರಳಲಿರುವ ಪರಿಪೂರ್ಣ ತಂಡದಲ್ಲಿ ಮೇಳದ ವ್ಯವಸ್ಥಾಪಕ ಪ್ರಶಾಂತ್ ಪೂಜಾರಿ ಪಜೀರು ಮಸ್ಕತ್, ಮೇಳದ ಗೌರವ ಸಲಹೆಗಾರ, ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಡಿ ಸುವರ್ಣ ಕರ್ನಿರೆ, ಭಾಗವತಿಕೆಯಲ್ಲಿ ಗಿರೀಶ್ ರೈ ಕಕ್ಕೆಪದವು, ನಿರಂಜನ ಪೂಜಾರಿ ಬಡಗಬೆಳ್ಳೂರು, ಚೆಂಡೆ ವಾದಕ ಅಡೂರು ಹರೀಶ್ ರಾವ್, ಮದ್ದಲೆ ಮಾಂತ್ರಿಕ ಗಣಪತಿ ನಾಯಕ್ ನೇರೋಳು, ಪ್ರಧಾನ ಹಾಸ್ಯಗಾರ ಕಡಬ ದಿನೇಶ್ ರೈ, ಅರ್ಚಕ ಸಂತೋಷ್ ಶಾಂತಿ, ಸ್ತ್ರೀ ವೇಷದಲ್ಲಿ ಬೋಳಂತೂರು ಜಗದೀಶ್ ಗೌಡ, ನಿಶಾಂತ್ ಪೂಜಾರಿ ಮುಚ್ಚೂರು, ಮಿಥುಲ್ ಗೌಡ ಪಂಜ, ಸುಹಾನ್ ಪೂಜಾರಿ ಜಪ್ಪಿನಮೊಗರು, ಸರ್ವಶ್ರೀಗಳಾದ ದಾಮೋದರ ಪಾಟಾಳಿ ಶರವು, ನಾರಾಯಣ ಎಂ ಪೂಜಾರಿ ಪೇಜಾವರ, ಗಂಗಾಧರ ಕಾಯರ್ತಡ್ಕ, ರವಿ ಶೆಟ್ಟಿ ಕಿದೂರು, ಸತೀಶ್ ಸುವರ್ಣ ದೈಗೋಳಿ, ರಾಜೇಶ್ ಶೆಟ್ಟಿ ಮಾಳ, ಶೇಖರ ಜಯನಗರ, ಲಕ್ಷಣ ಗೌಡ ಮುಚ್ಚೂರು, ಸತೀಶ್ ಗೌಡ ನೀರ್ಕೆರೆ, ಮಂದಾರ ಪೂಜಾರಿ ಮೂಡಬಿದ್ರೆ, ಸುಹಾಸ್ ಪೂಜಾರಿ ಜಪ್ಪಿನಮೊಗರು ಪಾಲ್ಗೊಳ್ಳಲಿದ್ದಾರೆ.

ಯಶಸ್ವಿ ಮೇಳದ ಹಿಂದೆ:
ಗೆಜ್ಜೆಗಿರಿ ಮೇಳದ ವ್ಯವಸ್ಥಾಪಕರಾದ ಪ್ರಶಾಂತ್ ಪೂಜಾರಿ ಪಜೀರು ಮಸ್ಕತ್ ಅವರ ವ್ಯವಸ್ಥಾಪಕತ್ವದಲ್ಲಿ, ನವೀನ್ ಸುವರ್ಣ ಸಜಿಪ ಮತ್ತು ನವೀನ್ ಅಮೀನ್ ಶಂಕರಪುರ ಅವರ ಸಂಚಾಲಕತ್ವದಲ್ಲಿ ಮೇಳವು ಯಶಸ್ವಿ ಪಥದಲ್ಲಿ ಮುನ್ನಡೆಯುತ್ತಿದೆ. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಹಾಗೂ ಸಮಿತಿ ಮಾರ್ಗದರ್ಶನದಲ್ಲಿ ಈ ಎಲ್ಲಾ ಸಾಧನೆಯ ಮೈಲುಗಳನ್ನು ಮೆಟ್ಟಿ ಮುಂದೆ ಸಾಗುತ್ತಿದೆ.

Related Posts

Leave a Reply

Your email address will not be published.