ಬಹರೈನ್: ಅ.27ರಂದು “ಎಲ್ಲಾದರೂ ಇರು ಎಂತಾದರೂ ಇರು” ಕನ್ನಡ ಕಿರು ಚಲನಚಿತ್ರ ಪ್ರೀಮಿಯರ್ ಪ್ರದರ್ಶನ

ಬಹರೈನ್ ದ್ವೀಪರಾಷ್ಟ್ರದಲ್ಲಿ ಚಿತ್ರೀಕರಣಗೊಂಡಿರುವ ಕಿರುಚಲನ ಚಿತ್ರ “ಎಲ್ಲಾದರೂ ಇರು ಎಂತಾದರೂ ಇರು” ಇದೀಗ ತೆರೆಗೆ ಬರಲು ಸಿದ್ಧವಾಗಿ ನಿಂತಿದೆ. ಕನ್ನಡಿಗ ಚರಣ್ ಅಕ್ಷಯ್ ರವರು ಇಂತಹ ಒಂದು ಸಾಹಸಕ್ಕೆ ಕೈ ಹಾಕಿದ್ದು, ಈ ಚಿತ್ರವು ಅಕ್ಟೋಬರ್ 27ರಂದು ಮನಾಮದಲ್ಲಿರುವ ಅಲ್ ಹಮ್ರಾ ಚಿತ್ರ ಮಂದಿರದಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ.

ಸ್ನೇಹಿತರ ಗಾಢ ಸ್ನೇಹದ ಜೊತೆಗೆ ಕನ್ನಡ ನಾಡು, ನುಡಿಯ ಬಗ್ಗೆ ಅವರಿಗಿರುವ ಕಾಳಜಿಯ ಎಳೆಯೊಂದನ್ನು ಇಟ್ಟುಕೊಂಡು ಮಾಡಿರುವ ಈ ಚಿತ್ರವನ್ನು ಚರಣ್ ಅಕ್ಷಯ್ ರವರು ಈ ಚಿತ್ರವನ್ನು ನಿರ್ಮಿಸುವುದರೊಂದಿಗೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಕಲ್ಲಡ್ಕ, ಸಂಪತ್ ಜತ್ತನ್ನ, ಪುಷ್ಪರಾಜ್ ಶೆಟ್ಟಿ, ವಿಶಾಲ್ ಶೆಟ್ಟಿ , ಖುಷಿ ,ಸುಹಾನಿ ,ಸುಜಯ ಲಕ್ಷ್ಮೀಶ್ ,ಫೆರಿಲ್ ರೊಡ್ರಿಗಾಸ್ ಮುಖ್ಯ ತಾರಾಗಣದಲ್ಲಿದ್ದು, ಉಳಿದಂತೆ ಇದರಲ್ಲಿ ದ್ವೀಪದ ಕಲಾವಿದರೇ ಕಾಣಿಸಿಕೊಂಡಿದ್ದಾರೆ.

ಯುವ ನಿರ್ದೇಶಕ ವಿನಾಯಕ ಗೋಡ್ಸೆರೆ ನಿರ್ದೇಶನ ಮಾಡಿದ್ದರೆ, ಖ್ಯಾತ ಛಾಯಾಗ್ರಾಹಕ ವಿನೀತ್ ಸುವರ್ಣ ರವರು ಬಹರೈನ್ ದ್ವೀಪದ ಸುಂದರ ತಾಣಗಳನ್ನು ತಮ್ಮ ಕೆಮಾರಾದ ಕಣ್ಣುಗಳಿಂದ ಸೆರೆಹಿಡಿದಿದ್ದಾರೆ.”ಸರ್ಕಸ್ ” ಹಾಗು “ಗಿರ್ಗಿಟ್ ” ಚಿತ್ರ ಖ್ಯಾತಿಯ ಸಂಕಲನಕಾರ ರಾಹುಲ್ ರವರ ಸಂಕಲನ ಈ ಚಿತ್ರಕ್ಕಿದೆ. ನಿರ್ಮಾಣದ ಮೇಲ್ವಿಚಾರಕರಾಗಿ ಪ್ರಕಾಶ್ ಹಾಗು ಕಿರಣ್ ಸುವರ್ಣ ರವರು ಕಾರ್ಯನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಕನ್ನಡ ಹಿರಿಮೆ ಗರಿಮೆಗಳನ್ನು ಸಾರುವ ಒಂದು ಹಾಡು ಅದ್ಭುತವಾಗಿ ಮೂಡಿಬಂದಿದ್ದು ಇದನ್ನು ಖ್ಯಾತ ಹಿನ್ನೆಲೆ ಗಾಯಕ ಕೀರ್ತನ್ ಹೊಳ್ಳರವರು ಹಾಡಿದ್ದಾರೆ. ರೋಹಿತ್ ಪೂಜಾರಿಯವರ ಸಂಗೀತ ಈ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

ಚಿತ್ರದ ಯಶಸ್ಸಿಗೆ ಕನ್ನಡ ಚಲನಚಿತ್ರರಂಗದ ನಟ, ನಟಿಯರು,ಗಾಯಕ ಗಾಯಕಿಯರು, ಸಂಗೀತ ನಿರ್ದೇಶಕರು ಶುಭ ಹಾರೈಸಿದ್ದಾರೆ. 435 ಆಸನಗಳಿರುವ “ಮನಮಾ”ದಲ್ಲಿರುವ ಬ್ರಹತ್ ಚಿತ್ರ ಮಂದಿರದಲ್ಲಿ ಈ ಚಿತ್ರ ತೆರೆಕಾಣಲಿದ್ದು, ಪ್ರೀಮಿಯರ್ ಪ್ರದರ್ಶನದ ಬಹುತೇಕ ಟಿಕೇಟುಗಳು ಇದಾಗಲೇ ಮುಂಗಡವಾಗಿ ಮಾರಾಟವಾಗಿದೆ. ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಚಿತ್ರ ನಿರ್ಮಾಪಕರಾದ ಚರಣ್ ಅಕ್ಷಯ್ ರವರನ್ನು ದೂರವಾಣಿ ಸಂಖ್ಯೆ 00973 38006315 ಮೂಲಕ ಸಂಪರ್ಕಿಸಬಹುದು.

Related Posts

Leave a Reply

Your email address will not be published.