ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ || MP GURURAJ GANTIHOLE VISITED FLOOD AFFECTED AREAS.

ಬೈಂದೂರು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದ ಪರಿಣಾಮವಾಗಿ ಕೆಲವೆಡೆ ಅಪಾರ ಹಾನಿ ಸಂಭವಿಸಿದೆ. ಬೈಂದೂರಿನ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೃಷಿಗೂ ಹಾನಿ ಸಂಭವಿಸಿದೆ. ಇಂದು ಶಾಸಕ ಗುರುರಾಜ್ ಗಂಟಿಹೊಳೆ ಅವರು ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.

ಕಳೆದ 5 ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೌಪರ್ಣಿಕಾ ನದಿ ನೀರಿನ ಮಟ್ಟ ಹೆಚ್ಚಾಗಿದೆ. ನದಿಯ ಅಕ್ಕ ಪಕ್ಕ ಪ್ರದೇಶಗಳಾದ ನಾವುಂದ, ಸಾಲ್ಬುಡ, ಬಡಾಕೆರೆ, ನಾಡ, ಕಡ್ಕೆ, ಮರವಂತೆ, ಪಡುಕೋಣೆ, ಪ್ರದೇಶಗಳಿಗೆ ಭೇಟಿ ನೀಡಿ ನೆರೆಯಿಂದ ಆಗುವ ಸಮಸ್ಯೆಗಳ ಬಗ್ಗೆ ಸ್ಥಳೀಯ ಹಾಗೂ ಪಂಚಾಯತ್ ಪ್ರತಿನಿಧಿಯೊಂದಿಗೆ ಚರ್ಚಿಸಿದರು. ನಂತರ ಜಾನುವಾರುಗಳಿಗೆ ಶಾಶ್ವತ ಕೊಟ್ಟಿಗೆ ನಿರ್ಮಾಣ ಹಾಗೂ ಗದ್ದೆ ಪ್ರದೇಶದಲ್ಲಿರುವ ತೋಡುಗಳ ಹೂಳೆತ್ತುವ ಕಾರ್ಯ ನದಿ ದಂಡೆ ನಿರ್ಮಾಣಕ್ಕೆ ವಿಶೇಷ ಅನುದಾನ ಬಗ್ಗೆ ಚರ್ಚಿಸಿದರು.

ಶಿರೂರು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಒತ್ತಿನೆಣೆ ಗುಡ್ಡ ಕುಸಿತ ಉಂಟಾಗಿದ್ದು ಹೆದ್ದಾರಿ ಮೇಲ್ಗಡೆ ಮಣ್ಣು ಉರುಳಿದ ಪರಿಣಾಮ ಒಂದು ಭಾಗದ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುಡ್ಡದ ಮೇಲ್ಬಾಗದಲ್ಲಿ ಬಂಡೆಯೊಂದು ಉರುಳುವ ಅಪಾಯದ ಭೀತಿಯಿದೆ. ಮಳೆ ಮುಂದುವರಿದರೆ ಮತ್ತಷ್ಟು ಗುಡ್ಡ ಕುಸಿಯುವ ಭೀತಿಯಲ್ಲಿದೆ. ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಕಾಮಗಾರಿಯನ್ನು ಕುಲಂಕುಶವಾಗಿ ಅಧಿಕಾರಿಗಳ ಜೊತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರು ಸಂಬಂಧಪಟ್ಟ ಅಧಿಕಾರಿಗಳು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.