ಮುಜುಗರ ತರುವ ಬೆಡ್ ವೆಟ್ಟಿಂಗ್ ಸಮಸ್ಯೆ

ನಿದ್ರಿಸುವ ವೇಳೆ ಮಕ್ಕಳು ತಮಗರಿವಿಲ್ಲದೆ ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ಬೆಡ್ ವೆಟ್ಟಿಂಗ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ 5ರಿಂದ6 ವರ್ಷದವರೆಗೆ ಮೂತ್ರ ಚೀಲದ ಮೇಲಿನ ನಿಯಂತ್ರಣವಿರುವುದಿಲ್ಲ. ಈ ಕಾರಣಕ್ಕಾಗಿ ಹೆಚ್ಚಾಗಿ 5ರಿಂದ 6 ವರ್ಷದವರೆಗೆ ಡೈಪರ್ ಹಾಕಿ ಮಕ್ಕಳನ್ನು ಮಲಗಿಸುತ್ತಾರೆ. ಆ ಬಳಿಕವೂ ಈ ಸಮಸ್ಯೆ ಕಂಡು ಬಂದಲ್ಲಿ ಯಾಕಾಗಿ ಈ ನಿಯಂತ್ರಣ ಬಂದಿಲ್ಲ ಎಂಬುದನ್ನು ಹೆತ್ತವರ ಮತ್ತು ವೈದ್ಯರು ಕೂಲಂಕುಷವಾಗಿ ವಿಮರ್ಷಿಸಬೇಕಾಗುತ್ತದೆ. ಹೆಚ್ಚಿನ ತಾಯಂದಿರು ತಮ್ಮ ಮಕ್ಕಳು ಹಾಸಿಗೆ ಒದ್ದೆ ಮಾಡುತ್ತಾರೆ ಎಂದು ಗೊಣಗುವುದನ್ನು ನಾವು ನೋಡಿದ್ದೇವೆ. ಮನೆಯಲ್ಲಿ ಇರುವಾಗ ಓಕೆ. ಯಾಕೆಂದರೆ ಒದ್ದೆಯಾದ ಹೊದಿಕೆಯನ್ನು ತಾಯಿ ತೊಳೆದು ಒಗೆದು ಒಣಗಿಸಿ ಕೊಡುತ್ತಾಳೆ. ಆದರೆ ಅದೇ ಸಮಸ್ಯೆ ಮುಂದುವರಿದಲ್ಲಿ ಮಕ್ಕಳು ಸ್ನೇಹಿತರ ಎದುರು ಮುಜುಗರ ಅನುಭವಿಸಬೇಕಾಗುತ್ತದೆ. ಹೆಚ್ಚಾಗಿ 10 ವರ್ಷದ ಹೊತ್ತಿಗೆ ಮೂತ್ರದ ನಿಯಂತ್ರಣ ಸುಮಾರು 95 ಶೇಕಡಾ ಮಕ್ಕಳಿಗೆ ಬಂದಿರುತ್ತದೆ.

ಯಾಕಾಗಿ ಬರುತ್ತದೆ?

ಬೆಡ್ ವೆಟ್ಟಿಂಗ್ ಸಮಸ್ಯೆ ಹತ್ತಾರು ಕಾರಣಗಳಿಂದ ಬರುವ ಸಾಧ್ಯತೆ ಇರುತ್ತದೆ. ಮೂತ್ರಕೋಶದ ಗಾತ್ರ ಚಿಕ್ಕದಾಗಿರುವುದು ಸಾಮಾನ್ಯ ಕಾರಣವಾಗಿರುತ್ತದೆ. ಮೂತ್ರಕೋಶ ಬೆಳೆದಂತೆಲ್ಲಾ ಈ ಸಮಸ್ಯೆ ತನ್ನಿಂತಾನೇ ನಿವಾರಣೆಯಾಗುತ್ತದೆ. ಇದರ ಜೊತೆಗೆ ನಿದ್ರೆಯಲ್ಲೆ ಉಸಿರುಗಟ್ಟುವುದು, ಮೂತ್ರನಾಳದಲ್ಲಿ ಸೋಂಕು, ಮಧುಮೇಹ, ಮೂತ್ರಕೋಶ ನಿಯಂತ್ರಿಸಲು ಪಕ್ವತೆಯ ವಿಳಂಬ, ಅತಿಯಾದ ಮೂತ್ರದ ಉತ್ಪತ್ತಿ, ರಸದೂತಗಳ ಅಸಮತೋಲನ ಮುಂತಾದ ಕಾರಣಗಳಿಂದಲೂ ರಾತ್ರಿ ಹೊತ್ತು ಮೂತ್ರ ಹೆಚ್ಚು ಬಂದು, ಬೆಡ್ ವೆಟ್ಟಿಂಗ್ ಸಮಸ್ಯೆ ಕಾಣಿಸಿಕೊಳ್ಳಬಹುದು.

bedwetting problem

ಹೆತ್ತವರ ಜವಾಬ್ದಾರಿ ಏನು?

5 ವರ್ಷ ಕಳೆದ ಬಳಿಕವೂ ಮಕ್ಕಳು ಹಾಸಿಗೆ ಒದ್ದೆ ಮಾಡುತ್ತಿದ್ದರೆ ವೈದ್ಯರ ಸಲಹೆ ಅವಶ್ಯಕ.

  1. ಯಾವುದೇ ಕಾರಣಕ್ಕೂ ಮಕ್ಕಳನ್ನು ದೂಷಿಸಬೇಡಿ, ಬೈಯ್ಯಬೇಡಿ, ಇತರ ಮಕ್ಕಳ ಎದುರಂತೂ ಆ ವಿಷಯವನ್ನು ಚರ್ಚಿಸಲೇಬಾರದು. ಬಲವಂತವಾಗಿ ಗೇಲಿ ಮಾಡಲೇಬಾರದು. ರಾತ್ರಿ ಊಟದ ಸಮಯದಲ್ಲಿ ಅತಿ ಕಡಮೆ ದ್ರವಾಹಾರ ನೀಡಬೇಕು.
  2. ರಾತ್ರಿ ಮಲಗುವ ಮೊದಲು ಮಗು ಶೌಚಾಲಯ ಹೋಗಿದೆಯೇ ಎಂದು ವಿಚಾರಿಸಿಕೊಳ್ಳಿ. ಮಲಗುವ ಮುನ್ನ ಮೂತ್ರ ವಿಸರ್ಜಿಸುವ ಹವ್ಯಾಸ ಬೆಳೆಸಿ.
  3. ಸಂಜೆ ಹೊತ್ತು ಕಳೆದ ಬಳಿಕ ಮಕ್ಕಳಿಗೆ ನೀರು ಸೇವನೆ ಮೇಲೆ ನಿಯಂತ್ರಣ ಇರಲಿ. ಹಗಲು ಹೊತ್ತು ಜಾಸ್ತಿ ನೀರು ಕೊಡಬಹುದು. ರಾತ್ರಿಯಾದಂತೆ ನೀರಿನ ಪ್ರಮಾಣವನ್ನು ಕಡಮೆ ಮಾಡಬೇಕು.
  4. ರಾತ್ರಿ ಮಲಗಿದ ಬಳಿಕ ಎರಡು ಗಂಟೆಗಳ ನಂತರ ಎಬ್ಬಿಸಿ ಮೂತ್ರ ಮಾಡಿಸುವ ಹವ್ಯಾಸ ಬೆಳಿಸಿಕೊಳ್ಳಿ. ಮಗುವಿನ ಮೂತ್ರ ಮಾಡುವ ಸಮಯ ಮತ್ತು ಪ್ರಮಾಣವನ್ನು ದಾಖಲಾತಿ ಮಾಡಬೇಕು.
  5. ಬೆಡ್ ವೆಟ್ಟಿಂಗ್ ಮಾಡುವ ಮಕ್ಕಳನ್ನು ಯಾವುದೇ ಕಾರಣಕ್ಕೂ ಹೀಯಾಳಿಸಬೇಡಿ. ಅದು ಮಕ್ಕಳ ಸಮಸ್ಯೆ ಅಲ್ಲ. ಮಲಬದ್ಧತೆ ಇರುವ ಮಕ್ಕಳಲ್ಲಿ ಈ ಬೆಡ್ ವೆಟ್ಟಿಂಗ್ ಸಮಸ್ಯೆ ಜಾಸ್ತಿ ಇರುತ್ತದೆ. ಮಗು ಗಾಢ ನಿದ್ರೆಯಲ್ಲಿರುವಾಗ ಮೂತ್ರಕೋಶ ತುಂಬಿದ ಸಂದೇಶ ಮೆದುಳಿಗೆ ತಲುಪಿಸಿದರೂ ಮಗು ಏಳದೇ ಇರಬಹುದು. ಇನ್ನು ಕೆಲವು ಮಕ್ಕಳಲ್ಲಿ ಮೂತ್ರಕೋಶದೊಂದಿಗೆ ಮೆದುಳು ಹೇಗೆ ಸಂವಹನ ಮಾಡಬೇಕು ಎಂಬುದನ್ನು ಕಲಿಯದೇ ಇರಬಹುದು ಮತ್ತು ಪ್ರತಿ ಅಂಗವೂ ಸ್ವತಂತ್ರವಾಗಿ ಕೆಲಸ ಮಾಡುತ್ತಿರಬಹುದು. ಮೂತ್ರಕೋಶ ಚಿಕ್ಕದಾಗಿದ್ದರೂ ರಾತ್ರಿ ಬೆಡ್ ವೆಟ್ಟಿಂಗ್ ಸಮಸ್ಯೆ ಬರಬಹುದು. ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿ ವ್ಯಕ್ತಿತ್ವಕ್ಕೆ ಧಕ್ಕೆ ಆಗಬಹುದು. ಖಿನ್ನತೆ, ಸಾಮಾಜಿಕ ಹಿಂಜರಿತ ಮತ್ತು ಕೀಳರಿಮೆಗೆ ಕಾರಣವಾಗಬಹುದು. ಮಗುವಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿ ಭರವಸೆಯ ಮಾತನ್ನು ಆಡಬೇಕು.
  6. ಬೆಡ್ ವೆಟ್ಟಿಂಗ್ ಎನ್ನುವುದು ಒಂದು ಸಾಮಾನ್ಯ ಸಮಸ್ಯೆ. ಸಾಮಾನ್ಯವಾಗಿ ಮಗು ಮತ್ತು ಹೆತ್ತವರು ಮಾನಸಿಕವಾಗಿ ಈ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಗಂಭೀರವಾದ ಸಮಸ್ಯೆ ಅಲ್ಲದಿದ್ದರೂ, ಮಾನಸಿಕ ದೃಷ್ಟಿಕೋನದಲ್ಲಿ ನೋಡಿದರೆ ಮಗು ಮತ್ತು ಹೆತ್ತವರಿಗೆ ಈ ಸಮಸ್ಯೆ ಎದುರಿಸುವುದೇ ಬಹುದೊಡ್ಡ ಸವಾಲಾಗಿರುತ್ತದೆ. ವೈದ್ಯರು, ಹೆತ್ತವರು ಮತ್ತು ಮಕ್ಕಳು ಎಲ್ಲರ ಪ್ರಯತ್ನದಿಂದ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ
    .
    ಮೂತ್ರ ಕೋಶದ ವ್ಯಾಯಾಮ ಹಾಸಿಗೆ ಒದ್ದೆ ಮಾಡುವ ಸಮಸ್ಯೆ ಇರುವ ಮಕ್ಕಳಿಗೆ ಮೂತ್ರ ಕೋಶದ ವ್ಯಾಯಾಮ ಅತೀ ಪರಿಣಾಮಕಾರಿ. ಇದರಿಂದ ಮೂತ್ರಕೋಶದ ನಿಯಂತ್ರಣವಾಗುವುದು ಮತ್ತು ದೊಡ್ಡದಾಗುತ್ತದೆ. ಮೂತ್ರವಿಸರ್ಜನೆ ಮಾಡಬೇಕೆನಿಸಿದಾಗ 10 ರಿಂದ 20 ನಿಮಿಷಗಳ ಕಾಲ ಉದ್ದೇಶ ಪೂರ್ವಕವಾಗಿ ತಡೆಯುವುದು ಮೊದಲ ವ್ಯಾಯಾಮ ಹಗಲು ಹೊತ್ತು ಈ ವ್ಯಾಯಾಮ ಮಾಡಬೇಕು ಇನ್ನು ಹಗಲು ಹೊತ್ತು ಹೆಚ್ಚು ನೀರು, ದ್ರವ ಆಹಾರ ಸೇವಿಸಿ ಮೂತ್ರಕೋಶದ ಗಾತ್ರವನ್ನು ಹಿಗ್ಗಿಸಬಹುದು. ಮೊಣ ಕಾಲುಗಳ ಮೇಲೆ ಸಣ್ಣ ಚೆಂಡನ್ನು ಹಿಡಿದಿಟ್ಟುಕೊಂಡು ಹಿಸುಕುವ ಮೂಲಕ ಮಾಡುವ ಕೆಗೆಲ್ ವ್ಯಾಯಾಮವು ಸಹ ಮೂತ್ರಕೋಶದ ಸ್ನಾಯುಗಳನ್ನು ಬಲ ಪಡಿಸಲು ಸಹಾಯ ಮಾಡುತ್ತದೆ. ಶ್ರೋಣಿ ಕುಹರದ ಮೂಲಕ ಸ್ನಾಯುಗಳು ನಿಯಂತ್ರಿತ ಬಾಗುವಿಕೆಯ ಪರಿಣಾಮವಾಗಿ ಮಕ್ಕಳು ಹಾಸಿಗೆ ಒದ್ದೆ ಮಾಡುವ ಸಾಧ್ಯತೆ ಇರುತ್ತದೆ. ಸ್ವಲ್ಪ ಎಣ್ಣೆಯನ್ನು ಅಂಗೈಗೆ ಹಚ್ಚಿಕೊಂಡು ಮಗುವಿನ ಹೊಟ್ಟೆಯ ಕೆಳಭಾಗಕ್ಕೆ ಹಚ್ಚಿ ಮಸಾಜ್ ಮಾಡಿದಲ್ಲಿ ಮೂತ್ರನಾಳದ ಸ್ನಾಯುಗಳು ಬಲಗೊಂಡು ಮೂತ್ರಕೋಶದ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಸಾಧ್ಯವಿದೆ.
bedwetting problem

ಕೊನೆಮಾತು

ನವಜಾತ ಶಿಶುವಿನ ಮೂತ್ರ ಚೀಲದಲ್ಲಿ 20ರಿಂದ 30mlನಷ್ಟು ಮೂತ್ರ ಹಿಡಿಯುತ್ತದೆ, ಮತ್ತು ದಿನವೊಂದರಲ್ಲಿ ಸುಮಾರು 20ರಿಂದ 20 ಬಾರಿ ಮೂತ್ರ ವಿಸರ್ಜಿಸುತ್ತಾರೆ. ವಯಸ್ಕರ ಮೂತ್ರ ಚೀಲದಲ್ಲಿ 500ರಿಂದ 600ml ನಷ್ಟು ಮೂತ್ರ ಶೇಖರಣೆಯಾಗುವ ಸಾಮಥ್ರ್ಯ ಇರುತ್ತದೆ. 150mlಗಿಂತ ಜಾಸ್ತಿ ಶೇಖರಣೆಯಾದ ಕೂಡಲೇ ಮೂತ್ರ ಮಾಡಬೇಕು ಎಂಬ ಸಂದೇಶ ಮೆದುಳಿನಿಂದ ಮೂತ್ರಕೋಶಕ್ಕೆ ರವಾನೆಯಾಗುತ್ತದೆ. ಪ್ರತಿ ವ್ಯಕ್ತಿ ದಿನವೊದರಲ್ಲಿ 1500mlನಷ್ಟು ಮೂತ್ರವನ್ನು 24 ಗಂಟೆಗಳಲ್ಲಿ ವಿಸರ್ಜಿಸುತ್ತಾನೆ. ಮತ್ತು ದಿನವೊಂದರಲ್ಲಿ 5ರಿಂದ 6 ಬಾರಿ ಮೂತ್ರ ವಿಸರ್ಜಿಸುತ್ತಾರೆ. ಇದು ವ್ಯಕ್ತಿಯ ದೇಹದ ಆರೋಗ್ಯ, ತಿನ್ನುವ ಆಹಾರ, ಹೊರಗಿನ ವಾತಾವರಣ ಮುಂತಾದವುಗಳ ಮೇಲೆ ನಿರ್ಧರಿತವಾಗಿರುತ್ತದೆ. ನವಜಾತ ಶಿಶು ಬೆಳೆದಂತೆಲ್ಲಾ, ಮೂತ್ರಚೀಲದ ಶೇಖರಣಾ ಸಾಮಥ್ರ್ಯ ಹೆಚ್ಚುತ್ತಲೇ ಹೋಗುತ್ತದೆ. ಸುಮಾರು 6ರಿಂದ 7 ವರ್ಷದ ಹೊತ್ತಿಗೆ ಸುಮಾರು 400ರಿಂದ 500ml ನಷ್ಟು ಮೂತ್ರ ಶೇಖರಣೆಯಾಗುವ ಸಾಮಥ್ರ್ಯ ಬಂದಿರುತ್ತದೆ. ಹತ್ತು ವರ್ಷವಾಗುವ ಹೊತ್ತಿಗೆ ಶೇಕಡಾ 95ರಷ್ಟು ಮಕ್ಕಳಿಗೆ ಮೂತ್ರ ವಿಸರ್ಜನೆಯಲ್ಲಿ ಪರಿಪೂರ್ಣ ಹತೋಟಿ ಬಂದಿರುತ್ತದೆ. ಈ ಬೆಡ್ ವೆಟ್ಟಿಂಗ್ ಸಮಸ್ಯೆ ಎನ್ನುವುದು ಮಾರಣಾಂತಿಕ ಸಮಸ್ಯೆ ಅಲ್ಲದಿದ್ದರೂ, ಹೆತ್ತವರಿಗೆ ಮತ್ತು ಮಕ್ಕಳಿಗೆ ಬಹಳಷ್ಟು ಮುಜುಗರ ಉಂಟು ಮಾಡುವ ಸಮಸ್ಯೆಯಾಗಿರುವುದರಿಂದ ಸಕಾಲದಲ್ಲಿ ಗುರುತಿಸಿ ಮಾನಸಿಕ ಧೈರ್ಯ ನೀಡಿ, ಚಿಕಿತ್ಸೆ ಮಾಡಿದಲ್ಲಿ ಮಗುವಿನ ಮನಸ್ಸಿನ ಮೇಲೆ ಉಂಟಾಗುವ ದುಷ್ಟರಿಣಾಮವನ್ನು ಯಶಸ್ವಿಯಾಗಿ ತಡೆಗಟ್ಟಬಹುದು.

ಡಾ| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
Consultant Oral and Maxillofacial Surgeon
[email protected]
9845135787

Related Posts

Leave a Reply

Your email address will not be published.