ಕೌಕ್ರಾಡಿ ಗ್ರಾಮದ ಮೂಲಕ ನೆಲ್ಯಾಡಿ ಪೇಟೆಯನ್ನು ಸಂಪರ್ಕಿಸುವ ಪುತ್ಯೆ ರಸ್ತೆಗಿಲ್ಲವೇ ದುರಸ್ತಿ ಭಾಗ್ಯ?

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮೂಲಕ ನೆಲ್ಯಾಡಿ ಪೇಟೆಯನ್ನು ಸಂಪರ್ಕಿಸುವ ಪುತ್ಯೆ ಪ್ರದೇಶದ 800 ಮೀಟರ್ ರಸ್ತೆಗೆ ಡಾಂಬರು ಅಥವಾ ಕಾಂಕ್ರೀಟ್ ಕಾಣದೆ ದಶಕಗಳ ಕಾಲವೇ ಸಂದಿದ್ದು ಸಂಚಾರಕ್ಕೆ ಆಯೋಗ್ಯವಾಗಿದೆ.

ದಿನಂಪ್ರತಿ ನೂರಾರು ನೌಕರರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಶ್ರೀ ಕ್ಷೇತ್ರ ಕೊಕ್ಕಡ, ಸೌತಡ್ಕ, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುವ ಭಕ್ತರೂ ಕೂಡ ಈ ರಸ್ತೆ ಮೂಲಕವೇ ಪ್ರಯಾಣಿಸುತ್ತಿದ್ದಾರೆ.

ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಸರ್ವಋತು ರಸ್ತೆ ದುರಸ್ತಿಗೊಳ್ಳಲೇ ಇಲ್ಲ. ಈ ರಸ್ತೆ ಸಂಪೂರ್ಣ ಹೊಂಡಮಯವಾಗಿರುವ ಕಾರಣ ಕೊಕ್ಕಡ-ಪೆರಿಯಶಾಂತಿ ರಸ್ತೆಯ ಮೂಲಕ ಸುತ್ತುವರಿದು ನೆಲ್ಯಾಡಿ ತಲುಪುವ ದುಸ್ಥಿತಿ ಬಂದೊದಗಿದೆ.

ದಿನಂಪ್ರತಿ ಪ್ರಯಾಣಿಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಸಂಚರಿಸುವ ಪರಿಸ್ಥಿತಿ ಬಂದಿದ್ದು ಶೀರ್ಘದಲ್ಲೇ ರಸ್ತೆಯನ್ನು ದುರಸ್ತಿಗೊಳಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

Related Posts

Leave a Reply

Your email address will not be published.