ಕುದುರೆ ಗ್ರಂಥಿಯಿಂದ ಬೆದರಿಕೆ || V4News

ಬೆಂಗಳೂರಿನ ಕುದುರೆಗಳಲ್ಲಿ ಗ್ಲಾಂಡರ್ಸ್ ಎಂಬ ಗ್ರಂಥಿ ರೋಗವು ಪತ್ತೆಯಾಗಿದ್ದು, ಅದು ಸಾಂಕ್ರಾಮಿಕವಾಗಿ ಹರಡುವ ಭೀತಿ ಎಲ್ಲೆಡೆ ಹಬ್ಬಿದೆ. ಇದು ಸದ್ಯ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಕುದುರೆಗಳಲ್ಲಿ ಕಂಡುಬಂದಿದೆ. ಸದ್ಯಕ್ಕೆ ಯಾವುದೇ ಮಾನವರಲ್ಲಿ ಈ ರೋಗ ಪತ್ತೆಯಾಗಿಲ್ಲವಾದರೂ ಮನುಷ್ಯರಲ್ಲಿ ಹರಡಬಹುದು ಎನ್ನುವ ಭೀತಿಯಂತೂ ಇದೆ.
ಲೋಕದ ಮನುಷ್ಯರು ಇನ್ನೂ ಕೋವಿಡ್ ಸೋಂಕು ರೋಗದಿಂದ ಹೊರ ಬಂದಿಲ್ಲ ಎಂದೇ ಹೇಳಲಾಗಿದೆ. ಆದರೆ ಇಂದು ಜನಸಾಮಾನ್ಯರು ಕೋವಿಡ್ ಭಯದಿಂದ ಮುಕ್ತರಾಗಿದ್ದಾರೆ. ಆ ಬಗೆಗೆ ಭೀತಿ ತಳೆಯುವುದನ್ನು ಬಿಟ್ಟಿದ್ದಾರೆ. ಆದರೆ ಈಗ ಬೆಂಗಳೂರಿನಲ್ಲಿ ಕುದುರೆಯ ಈ ಗ್ಲಾಂಡರ್ಸ್ ಕೂಡ ಸಾಂಕ್ರಾಮಿಕ ರೋಗವಾಗಿದ್ದು ಜನರಿಗೆ ಹಬ್ಬೀತು ಎನ್ನುವ ವಾತಾವರಣವೊಂದು ಸೃಷ್ಟಿಯಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿ ಖಾಲಿದ್ ಷರೀಫ್ ಎಂಬವರಿಗೆ ಸೇರಿದ ಕುದುರೆಯಲ್ಲಿ ಈ ಗ್ರಂಥಿ ರೋಗ ಕಂಡುಬಂದಿದೆ. 2009ರ ಸಾಂಕ್ರಾಮಿಕ ರೋಗಗಳ ಪ್ರಾಣಿಗಳ ನಿಯಂತ್ರಣ ಕಾಯ್ದೆಯಡಿ ಬಾಧಿತ ಕುದುರೆ ಇರುವಲ್ಲಿ 5 ಕಿಲೋಮೀಟರ್ ವ್ಯಾಪ್ತಿಯನ್ನು ಸೋಂಕಿತ ಪ್ರದೇಶವೆಂದೂ, 25 ಕಿಲೋಮೀಟರ್ ವ್ಯಾಪ್ತಿಯನ್ನು ಕಣ್ಗಾವಲು ವಲಯವೆಂದೂ ಘೋಷಿಸಲಾಗಿದೆ.
ಕುದುರೆಯು ಒಂದು ಸಾಕುಪ್ರಾಣಿಯಾಗಿದೆ. ಇತಿಹಾಸ ಕಾಲದಿಂದಲೂ ಅದು ಮಾನವನ ಆಹಾರ ಹಾಗೂ ಸಾಗಣೆ ವಾಹನವಾಗಿದೆ. ಕೃಷಿ ಉಳುಮೆ, ತೇರು, ಗಾಡಿ ಎಳೆಯುವುದು ಇತ್ಯಾದಿ ಕೆಲಸಕ್ಕೂ ಬಳಕೆಯಾಗಿದೆ. ವೇದ ಕಾಲದಲ್ಲಿ ಅಶ್ವಮೇಧ ಯಾಗವೂ ಒಂದು. ಇದು ಯಜ್ಞ ಕುಂಡಕ್ಕೆ ಕುದುರೆ ಬಲಿ ಕೊಡುವ ಒಂದು ಪದ್ಧತಿಯಾಗಿದೆ. ಕುದರೆ ಕೂಡ ಇತಿಹಾಸದಲ್ಲಿ ಮಾನವನ ಸಂಪತ್ತುಗಳಲ್ಲಿ ಒಂದು ಆಗಿತ್ತು. ಅರಸಾದವನು ಒಂದು ಪಟ್ಟದ ಕುದುರೆ ಹೊಂದುವುದೂ ಕ್ರಮವಾಗಿತ್ತು.
ಸೇನೆಗಳ ಚತುರಂಗ ಬಲದಲ್ಲಿ ಕುದುರೆ ದಳ ಕೂಡ ಒಂದು. ಆಧುನಿಕ ಯುದ್ಧದಲ್ಲಿ ಕುದುರೆಯ ಮಹತ್ವ ಇಳಿದಿದೆಯಾದರೂ ಕುದರೆಗಳ ತುಕಡಿಯೊಂದು ಈಗಲೂ ಸೇನೆಯಲ್ಲಿ ಇರುತ್ತದೆ. ಕುದುರೆಯು ಜೂಜು ಪ್ರಾಣಿಯಾಗಿಯೂ ಬಳಕೆಯಾಗಿದೆ. ರೇಸ್‍ಕೋರ್ಸ್‍ಗಳಲ್ಲಿ ನಡೆಯುವ ಕುದುರೆ ಓಟಗಳಿಗೆ ಸಂಬಂಧಿಸಿದಂತೆ ಕೋಟಿಗಟ್ಟಲೆ ಬೆಟ್ಟಿಂಗ್ ಅಧಿಕೃತವಾಗಿ ನಡೆಯುತ್ತದೆ. ಅನಧಿಕೃತ ಬೆಟ್ಟಿಂಗ್‍ಗಳೂ ಇರುತ್ತವೆ. ಪುರಾತನ ಕಾಲದಲ್ಲಿ ಅರಸು ಮಟ್ಟದಲ್ಲಿ ರಥಗಳ ಓಟದ ಸ್ಪರ್ಧೆ ಇರುತ್ತಿತ್ತು. ರೋಮನ್ ಸಾಮ್ರಾಜ್ಯದಲ್ಲಿ ಇದು ಸಾಮಾನ್ಯವಾಗಿತ್ತು.
ಐದು ಕೋಟಿಯಷ್ಟು ವರುಷಗಳ ಹಿಂದೆ ಕಾಡು ಕುದುರೆಗಳು ಗೊರಸು ಬೆರಳುಗಳನ್ನು ಹೊಂದಿದ್ದು, ವಿಕಾಸದ ಹಾದಿಯಲ್ಲಿ ಇಂದಿನ ಒಂಟಿ ಗೊರಸು ಪಾದದ ಪ್ರಾಣಿಯಾಗಿ ವಿಕಾಸ ಹೊಂದಿದೆ ಎಂಬುದು ಪ್ರಾಣಿಶಾಸ್ತ್ರ. ಇದು ಸಸ್ತನಿಯಾಗಿದ್ದು, ಬಹು ಹಿಂದಿನ ಕಾಲದಿಂದಲೂ ಮಾನವನ ಇತಿಹಾಸದೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಯಥಾಪ್ರಕಾರ ಆದಿ ಮಾನವನು ಕುದುರೆಗಳನ್ನು ಇತರ ಪ್ರಾಣಿಗಳಂತೆ ಬೇಟೆಯಾಡಿದ. ಮುಂದೆ ಹಸುಗಳನ್ನು ಮತ್ತು ಕುದುರೆಗಳನ್ನು ಸಾಕಿಕೊಂಡು ಬಳಸಿಕೊಳ್ಳತೊಡಗಿದ.
ಕುದುರೆಗಳು ಮಾನವನಿಗಿಂತ ಮೊದಲೇ ವಿಕಾಸಗೊಂಡು ಭೂಮಿಯಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದ ಜೀವಿಗಳಾಗಿದ್ದವು. ಆದರೆ ನಮಗೆ 5,000 ವರುಷಗಳಿಗಿಂತ ಹಿಂದೆ ಕುದುರೆಯು ಮಾನವನಿಗೆ ಹೇಗೆ ಒಡನಾಡಿಯಾಗಿತ್ತು ಎಂಬ ಬಗೆಗೆ ನಮ್ಮಲ್ಲಿ ಚಾರಿತ್ರಿಕ ದಾಖಲೆಗಳು ಇಲ್ಲ. ಆದರೆ ಮಾನವನು ಕುದುರೆಗಳನ್ನು ಹತ್ತಿಪ್ಪತ್ತು ಸಾವಿರ ವರುಷಗಳಿಗಿಂತ ಹಿಂದಿನಿಂದಲೂ ತನ್ನ ಒಡನಾಡಿಯಾಗಿಸಿಕೊಂಡಂತೆ ಪಳೆಯುಳಿಕೆ ಮೊದಲಾದವುಗಳಿಂದ ತಿಳಿದು ಬರುತ್ತದೆ.
ಭಾರತದಲ್ಲಿ ಬಹು ಹಿಂದೆ ಕುದುರೆಗಳ ಬಳಕೆ ತೀರಾ ಕಡಿಮೆ. ಮೊದಲು ಆರ್ಯರು ಮತ್ತು ಮುಂದೆ ಮುಸ್ಲಿಮರು ಬಂದ ಬಳಿಕವೇ ಕುದುರೆಗಳ ಬಳಕೆ ಭಾರತದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ಕುದುರೆಗಳ ಬದಲು ಹಿಂದೆ ಎತ್ತುಗಳು ಬಳಕೆಯಾಗಿವೆ. ಮುಂದೆ ಭಾರತದ ರಾಜಸತ್ತೆಗಳ ಕಾಲದಲ್ಲಿ, ಯೂರೋಪಿಯನರ ಆಗಮನದ ಬಳಿಕವೂ ಅರಬ್ಬರು ತರುವ ಕುದುರೆಗಳಿಗೇ ಇಲ್ಲಿ ಮಹತ್ವವಿದ್ದುದು.
ಬುರ್ಕೋಲ್ಡೇರಿಯಾ ಮಲ್ಲೈ ಎಂಬ ಬ್ಯಾಕ್ಟೀರಿಯಾದಿಂದ ಕುದುರೆಗಳ ಗ್ರಂಥಿ ರೋಗ ಬರುತ್ತದೆ. ಕುದುರೆಯಲ್ಲಿ ಕಾಣಿಸುವ ಈ ಗ್ರಂಥಿಗಳ ಕಾಯಿಲೆಯು ಕತ್ತೆಗಳು, ಹೇಸರಗತ್ತೆಗಳು, ಕೆಲವೊಮ್ಮೆ ಆಡು, ನಾಯಿ, ಬೆಕ್ಕುಗಳಿಗೂ ಸೋಂಕು ಕಾಯಿಲೆಯಾಗಿ ಬರುವ ಸಾಧ್ಯತೆ ಇದೆ ಎಂದು ಪಶು ವೈದ್ಯ ತಜ್ಞರು ತಿಳಿಸಿದ್ದಾರೆ. ಮನುಷ್ಯರಲ್ಲೂ ಈ ಕಾಯಿಲೆ ಗ್ರಂಥಿಗಳಿಗೆ ಹರಡುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಈ ಸೋಂಕು ಆದಾಗ ಜ್ವರ ತಲೆಗೇರಿದಂತೆ ಬರುತ್ತದೆ, ಪ್ರಾಣಿಯು ತೀವ್ರವಾಗಿ ಬೆವರುತ್ತದೆ. ಸ್ನಾಯು ಸೆಳೆತ, ಎದೆನೋವು, ತಲೆನೋವು ಇತ್ಯಾದಿಗಳು ಕೂಡ ಬರುತ್ತದೆ. ಗ್ರಂಥಿಗಳು ಎಂಬುದನ್ನು ಇಂಗ್ಲಿಷಿನ ಗ್ಲಾಂಡ್ ನುಡಿಗೆ ನಾವು ದುಡಿಸಿದ್ದೇವೆ. ಇಂಗ್ಲಿಷಿನ ಗ್ಲಾಂಡ್ ಶಬ್ದವು ಫ್ರೆಂಚ್ ಮೂಲದ್ದಾಗಿದೆ. ಗ್ರಂಥಿಗಳು ದುಗ್ಧರಸ ಸ್ರವಿಸುವ ಗ್ರಂಥಿಗಳಾಗಿದ್ದು, ಬ್ಯಾಕ್ಟೀರಿಯಾಗಳು ಅವುಗಳ ಮೇಲೆ ದಾಳಿಮಾಡಿ, ಆ ಗ್ರಂಥಿಗಳು ಸ್ರವಿಸುವ ರಸಗಳು ಶರೀರದಲ್ಲಿ ತಮ್ಮ ಕರ್ತವ್ಯ ಮಾಡದಂತೆ ಮಾಡುತ್ತವೆ.
ಬೆಂಗಳೂರಿನ ಕುದುರೆ ರೋಗದ ವಿಷಯದಲ್ಲಿ ಸಂಬಂಧಿಸಿದ ಪಶು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಂತಾ ಕುದುರೆಯನ್ನು ಸಾಯಿಸುವುದು ಕ್ರಮ. ಕುದರೆ ಮಾಲಕರ ಅನುಮತಿ ಇಲ್ಲದೆ ಕೂಡ ತೀವ್ರ ಸಾಂಕ್ರಾಮಿಕ ಕಾಲದಲ್ಲಿ ಕುದರೆಯನ್ನು ಅಧಿಕಾರಿಗಳು ಕೊಂದು ರೋಗ ಹರಡದಂತೆ ಕ್ರಮ ತೆಗೆದುಕೊಳ್ಳುತ್ತಾರೆ. ಕೆಮ್ಮು, ಜ್ವರ, ಮೂಗು ಸೋರುವಿಕೆಯ ಜೊತೆಗೆ ಬಾಧಿತ ಜೀವಿಯ ತೂಕವು ಬಹುಬೇಗ ತೀವ್ರವಾಗಿ ಇಳಿಯುತ್ತದೆ.
ಗ್ಲಾಂಡರ್ಸ್ ಬಾಧಿತರಿಗೆ ಆಂಟಿಬಯಾಟಿಕ್ ಆಧಾರಿತ ಚಿಕಿತ್ಸೆ ನೀಡಲಾಗುತ್ತದೆ. ಅದನ್ನನುಸರಿಸಿ ಬಾಧಿತನ ರೋಗ ಚಿಹ್ನೆಗೆ ಮತ್ತು ಪ್ರಯೋಗಾಲಯದ ಫಲಿತಾಂಶದ ಮೇಲೆ ಇತರ ಚಿಕಿತ್ಸೆ ನಡೆಯುತ್ತದೆ. ಇಕ್ವೀನಿಯಾ, ಫಾರ್ಸಿ, ಮಲ್ಯೂಸ್ ಎಂಬ ಹೆಸರಿನಿಂದಲೂ ಈ ಗ್ಲಾಂಡರ್ಸ್ ಕಾಯಿಲೆಯನ್ನು ಕರೆಯಲಾಗುತ್ತದೆ.