ಕಡಬ: ಪಟ್ಟಣ ಪಂಚಾಯತ್‌ನ 13 ವಾರ್ಡುಗಳಿಗೆ ಚುನಾವಣೆ :ಆಡಳಿತ ಸೌಧದಲ್ಲಿ ಸ್ಟ್ರಾಂಗ್ ರೂಮ್ : ಮಸ್ಟರಿಂಗ್ ಕಾರ್ಯ

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ 13 ವಾರ್ಡುಗಳಿಗೆ ನಾಳೆ (ಆ.17) ಚುನಾವಣೆ ನಡೆಯಲಿದ್ದು, ಇದರ ಅಂಗವಾಗಿ ಆ.16ರಂದು ತಾಲೂಕು ಆಡಳಿತ ಸೌಧದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಗಿದ್ದು ಮಸ್ಟರಿಂಗ್ ಕಾರ್ಯ ನಡೆಯಿತು.
ಪ್ರತಿ ಮತಗಟ್ಟೆಯಲ್ಲಿ ಪಿ.ಆರ್.ಒ. ಜೊತೆಗೆ ಮೂವರು ಸಿಬ್ಬಂದಿಗಳು ಹಾಗೂ ಓರ್ವ ಡಿ-ಗ್ರೂಪ್ ನೌಕರ ನಿಯೋಜನೆಯಾಗಿದ್ದು, ಮತಗಟ್ಟೆ ಸಿಬ್ಬಂದಿಗಳು ತಾಲೂಕು ಆಡಳಿತ ಸೌಧದಲ್ಲಿ ಹಾಜರಾಗಿ ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಸಂಜೆ ವೇಳೆಗೆ ಮತಯಂತ್ರಗಳು ಹಾಗೂ ಸಿಬ್ಬಂದಿಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಲಿದ್ದಾರೆ.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪ್ರಭಾಕರ ಖಜೂರೆ, ಉಪ ತಹಶೀಲ್ದಾರ್ (ಚುನಾವಣಾ ಶಾಖೆ) ಶಾಯಿದ್ದುಲ್ಲಾ ಖಾನ್, ಚುನಾವಣಾಧಿಕಾರಿಗಳಾದ ಪ್ರಮೋದ್ ಕುಮಾರ್, ವಿಮಲ್ ಬಾಬು, ಸಹಾಯಕ ಚುನಾವಣಾಧಿಕಾರಿಗಳಾದ ಭುವನೇಂದ್ರ ಕುಮಾರ್, ಸಂದೇಶ್, ಜಿ.ಪಂ. ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ಪಟ್ಟಣ ಪಂಚಾಯತ್ ಇಂಜಿನಿಯರ್ ಶಿವಕುಮಾರ್ ಎಂ.ಡಿ. ಮೊದಲಾದವರು ಉಪಸ್ಥಿತರಿದ್ದರು.
ಕಡಬ ಪೋಲಿಸರು ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಲು ಬಂದೋಬಸ್ತಿನಲ್ಲಿ ನಿರತರಾಗಿದ್ದಾರೆ