ಕಾರ್ಕಳ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ಶಾಲಾ ಮುಖ್ಯೋಪಾಧ್ಯಾಯನ ಬಂಧನ 

ಸುಮಾರು 13 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೋಳ ಗ್ರಾಮದ ಪಿಲಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಎ.6ರಂದು ಬಂಧಿಸಿದ್ದಾರೆ.

ಬೋಳ ವಂಜಾರಕಟ್ಟೆ ನಿವಾಸಿ, ಇಚ್ಚೋಡಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ರಾಜೇಂದ್ರ ಆಚಾರ್ಯ(58) ಬಂಧಿತ ಆರೋಪಿ.

ಈತ ಶಾಲೆಯ 13 ಮಕ್ಕಳಿಗೆ 2023ರ ಜೂ.5ರಿಂದ 2024ರ ಎ.3ರ ಮಧ್ಯಾವಧಿಯಲ್ಲಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೆ ವಿದ್ಯಾರ್ಥಿನಿಯೊಬ್ಬಳ ಅಕ್ಕನ ಮೊಬೈಲ್‌ಗೆ ಅಸಭ್ಯ ಫೋಟೊಗಳನ್ನು ಕಳುಹಿಸಿ ತೊಂದರೆ ನೀಡುತ್ತಿದ್ದನು ಎಂದು ದೂರಲಾಗಿದೆ.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ಪೊಲೀಸರು ಸಂಜೆ ಉಡುಪಿಯ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

Related Posts

Leave a Reply

Your email address will not be published.