ಕಾಪು ತಾಲೂಕು ದಸರಾ ಕ್ರೀಡಾಕೂಟ:ಹೆಜಮಾಡಿ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಚಾಲನೆ

ಪಡುಬಿದ್ರಿ :ಕಾಪು ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯೋಜನೆಯಲ್ಲಿ ಹೆಜಮಾಡಿ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾಪು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2025 – 26 ಭಾನುವಾರದಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ನವೀನ್ ಚಂದ್ರ ಎಸ್ ಸುವರ್ಣ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶವಿದೆ. ಯುವ ಸಮೂಹ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕ್ರೀಡೆಯು ದೈಹಿಕ, ಮಾನಸಿಕ ಸಮತೋಲನಕ್ಕೆ ಪೂರಕವಾಗಿದೆ. ಒತ್ತಡಗಳಿಂದ ದೂರವಾಗಲು ಕ್ರೀಡೆ ಅನಿವಾರ್ಯ ಎಂದರು.

ಕಾಪು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಶೆಟ್ಟಿ ಮಾತನಾಡಿ, ಸಮರ್ಪಕ ಕ್ರೀಡಾಂಗಣವಿಲ್ಲದಿದ್ದರೂ ಕಾಪು ತಾಲೂಕಿನಲ್ಲಿ ಸತತ 3 ವರ್ಷಗಳಿಂದ ದಸರಾ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದರು.

ಈ ಸಂದರ್ಭ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಮೆಂಡನ್, ಉಪಾಧ್ಯಕ್ಷರಾದ ಮೋಹನ್ ಸುವರ್ಣ, ರಾಷ್ಟ್ರೀಯ ಹೈ ಜಂಪ್ ಕ್ರೀಡಾಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ, ರಾಜ್ಯ ಸರಕಾರಿ ನೌಕರರ ಪರಿಷತ್ತು ನಿರ್ದೇಶಕ ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು.

ಯೋಗ, ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಕೊಕ್ಕೊ, ಫುಟ್ಬಾಲ್, ಅಥ್ಲೆಟಿಕ್ಸ್ ಮತ್ತು ವಿವಿಧ ಕ್ರೀಡೆಗಳು ಜರಗಿದವು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾಪು ತಾಲೂಕು ಅಧಿಕಾರಿ ರಿತೇಶ್ ಕುಮಾರ್ ಸ್ವಾಗತಿಸಿದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ನಿರೂಪಿಸಿ, ಎಸ್ ವಿ ಎಚ್ ಇನ್ನಂಜೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ವಂದಿಸಿದರು.

Related Posts

Leave a Reply

Your email address will not be published.