ಮಂಗಳೂರು : ತುಳು ನಾಟಕ ಕಾರ್ಯಾಗಾರ ಉದ್ಘಾಟನೆ

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ನಗರದ ಪಡೀಲ್ ಅಮೃತ ಕಾಲೇಜ್ ಸಹಯೋಗದಲ್ಲಿ ಆಯೋಜಿಸಲಾದ ತುಳು ನಾಟಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶತಮಾನಗಳ ಹಿಂದೆಯೇ ಪಂಜೆ ಮಂಗೇಶರಾಯರ ಕಾರಣದಿಂದಾಗಿ ಶಾಲೆಗಳಲ್ಲಿ ನಾಟಕ ಆರಂಭವಾಗಿತ್ತು ಎಂಬ ವಿಚಾರವನ್ನು ತಮ್ಮ ಲಕ್ಷಣ ಅವರು ಈ ಸಂದರ್ಭದಲ್ಲಿ ನೆನಪಿಸಿದರು.
ವಿದ್ಯಾರ್ಥಿಗಳು ತುಳು ನಾಟಕದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು, ಶಾಲೆಯಿಂದಲೇ ತುಳು ನಾಟಕಗಳ ಬೆಳವಣಿಗೆ ಆರಂಭಗೊಂಡಿತು ಹಾಗೂ ವೃತ್ತಿಪರವಾಗಿ ಬೆಳವಣಿಗೆ ಹೊಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ರಂಗನಟ ಪ್ರಭಾಕರ ಕಾಪಿಕಾಡ್ ಮಾತನಾಡಿ, ನಾಟಕದ ಮೂಲಕ ಸ್ನೇಹ, ಪ್ರೀತಿ, ಸಾಮರಸ್ಯವನ್ನು ಮೂಡಿಸಬೇಕು ಎಂದು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ, ಮಾತನಾಡಿ,ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ನಾಟಕದೊಂದು ಮೂಡಿ ಬರಲಿ ಎಂದು ಆಶಿಸಿದರು.
ಅಮೃತ ಕಾಲೇಜ್ ಪ್ರಿನ್ಸಿಪಾಲ್ ಡಾ.ಚಂದ್ರಹಾಸ ಕಣ್ವತೀರ್ಥ ಶುಭಕೋರಿ ಮಾತನಾಡಿದರು.
ಹತ್ತು ದಿನಗಳ ನಾಟಕ ಕಾರ್ಯಗಾರದ ಮೂಲಕ ಹೊಸ ತುಳು ನಾಟಕವನ್ನು ಪ್ರಸ್ತುತಪಡಿಸಲಾಗುವುದು ಎಂದು ಶಿಬಿರದ ನಿರ್ದೇಶಕ ಜಗನ್ ಪವರ್ ಬೇಕಲ್ ಅವರು ತಿಳಿಸಿದರು.
ಅಕಾಡೆಮಿ ಸದಸ್ಯೆ ಅಕ್ಷಯ ಆರ್ .ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
