ಮಂಗಳೂರು: ಕೋಸ್ಟ್ಗಾರ್ಡ್ ನಿಂದ ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ : ರಾಜ್ಯಪಾಲ ಗೆಹ್ಲೋಟ್ ಉಪಸ್ಥಿತಿ
ಭಾರತೀಯ ಕೋಸ್ಟ್ಗಾರ್ಡ್ ನ 49ನೆ ರೈಸಿಂಗ್ ಡೇಯ ಅಂಗವಾಗಿ ನಡೆದ ‘ಡೇ ಎಟ್ ಸೀ’ ಎಂಬ ಕೋಸ್ಟ್ ಗಾರ್ಡ್ನಿಂದ ಶೌರ್ಯದ ಅಣುಕು ಪ್ರದರ್ಶನ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ ನಡೆಯಿತು.

ಸಮುದ್ರ ಮಧ್ಯೆ ಹಡಗುಗಳಲ್ಲಿ ಸಂಭವಿಸುವ ಅನಾಹುತ, ಕಡಲ್ಗಳ್ಳರ ಪತ್ತೆ, ಅಪಾಯಕ್ಕೆ ಸಿಲುಕುವ ಮೀನುಗಾರಿಕಾ ಬೋಟು ಹಾಗೂ ಮೀನುಗಾರರ ರಕ್ಷಣೆಯ ನಿಟ್ಟಿನಲ್ಲಿ ಕರಾವಳಿ ರಕ್ಷಣಾ ಪಡೆಯಿಂದ ನಡೆಸಲಾಗುವ ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ ನವಮಂಗಳೂರು ಬಂದರು ಬಳಿಯ ಅರಬೀ ಸಮುದ್ರದಲ್ಲಿ ನಡೆಯಿತು.

ಭಾರತೀಯ ಕೋಸ್ಟ್ಗಾರ್ಡ್ನ 49ನೆ ರೈಸಿಂಗ್ ಡೇಯ ಅಂಗವಾಗಿ ನಡೆದ ‘ಡೇ ಎಟ್ ಸೀ’ ಎಂಬ ಕೋಸ್ಟ್ ಗಾರ್ಡ್ನ ಕಸರತ್ತಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರೆ, ಕೋಸ್ಟ್ ಗಾರ್ಡ್ನ ಸುಮಾರು ೪೦೦ ಸಿಬ್ಬಂದಿ ಈ ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಆಗ್ರವಾಲ್ ಸೇರಿದಂತೆ ಇತರ ಗಣ್ಯರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರನ್ನು ಹೊತ್ತ ಭಾರತೀಯ ಕೋಸ್ಟ್ ಗಾರ್ಡ್ನ ಮಂಗಳೂರು ಮೂಲದ ಹಡಗಾದ ವರಾಹ ನವ ಮಂಗಳೂರು ಬಂದರಿನಿಂದ ಹೊರಟು 20 ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರ ನಡುವೆ ನಡೆದ ಕೋಸ್ಟ್ಗಾರ್ಡ್ನ ವೈವಿಧ್ಯಮಯ ಕಸರತ್ತಿನ ಅಣುಕು ಪ್ರದರ್ಶನ ವೀಕ್ಷಣೆಗೆ ವೇದಿಕೆ ಕಲ್ಪಿಸಿತು.

ಸಮುದ್ರದಲ್ಲಿ ಕಡ್ಗಳ್ಳರು ಅಥವಾ ಅಕ್ರಮ ನುಸುಳುಕೋರರ ಹಡಗು ಪ್ರವೇಶ ಮಾಡಿದಾಗ ಅವುಗಳ ವಿರುದ್ಧ ಎಚ್ಚರಿಕೆಯ ಗುಂಡು ಹಾರಿಸುವ ಮೂಲಕ ತಡೆಯುವ ಅಣುಕು ಕಾರ್ಯಾಚರಣೆಯನ್ನು ಅಮಾರ್ತ್ಯ, ರಾಜ್ದೂತ್ ಹಾಗೂ ಸಾವಿತ್ರಿಭಾಯಿ ಫುಲೆ ಎಂಬ ಎಫ್ಪಿವಿಗಳು, ಎರಡು ಇಂಟರ್ಸೆಪ್ಟರ್ ಬೋಟುಗಳು ಹಾಗೂ ಹೆಲಿಕಾಪ್ಟರ್ ಮೂಲಕ ಪ್ರದರ್ಶಿಸಲಾಯಿತು.


ಅಣುಕು ಕಾರ್ಯಾಚರಣೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜತೆ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಕೂಡಾ ನವಮಂಗಳೂರು ಬಂದರು ತೀರಕ್ಕೆ ಆಗಮಿಸಿ ಕೋಸ್ಟ್ಗಾರ್ಡ್ ನ ಎಸ್ಪಿವಿ ಹಡಗು ‘ವರಾಹ’ ಮೇಲೇರಿದರು. ಕೋಸ್ಟ್ಗಾರ್ಡ್ ಅಧಿಕಾರಿ, ಸಿಬ್ಬಂದಿಯಿಂದ ಗೌರವ ರಕ್ಷೆ ಸ್ವೀಕಾರದ ಬಳಿಕ ಸ್ಪೀಕರ್ ಅವರು ಕೆಲ ನಿಮಿಷಗಳಲ್ಲೇ ವರಾಹದಿಂದ ತೆರಳಿದರು. ಬಳಿಕ ನವಮಂಗಳೂರು ತೀರದಿಂದ 20 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯೆ ಸುಮಾರು ನಾಲ್ಕು ಗಂಟೆಗಳವರೆಗೆ ನಡೆದ ಅಣುಕು ಕಾರ್ಯಾಚರಣೆಯನ್ನು ರಾಜ್ಯಪಾಲರು ವರಾಹದಲ್ಲಿ ಕುಳಿತು ವೀಕ್ಷಿಸಿದರು. ಕೋಸ್ಟ್ಗಾರ್ಡ್ ಜಿಲ್ಲಾ ಹೆಡ್ಕ್ವಾಟರ್ನ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.


















