ಮಂಗಳೂರು: ಮೀನುಗಾರಿಕಾ ಬಂದರು ಆಧುನೀಕರಣಕ್ಕೆ ಶಂಕುಸ್ಥಾಪನೆ
ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೀನುಗಾರರ ಬೇಡಿಕೆ ಏನು ಎಂದು ಕೇಳಿ ಯೋಜನೆ ರೂಪಿಸಿದರೆ ಮಾತ್ರ ಅವರ ಕಷ್ಟಗಳು ನಿವಾರಣೆಯಾಗಲು ಸಾಧ್ಯ. ಸಮುದ್ರ ತಟದಲ್ಲಿರುವ 16 ರಾಜ್ಯಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ, ಹಾಗಾಗಿ ಆಯಾ ರಾಜ್ಯದ ಆವಶ್ಯಕತೆಗೆ ಪೂರಕವಾಗಿ ಸಹಾಯ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಪ್ರಧಾನ ಮಂತ್ರಿ ಮತ್ಸ್ವ ಸಂಪದ ಯೋಜನೆಯಡಿ ಮಂಗಳೂರು ಮೀನುಗಾರಿಕ ಬಂದರಿನ ಆಧುನೀಕರಣ ಕಾಮಗಾರಿಗೆ ಶನಿವಾರ ಬಂದರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಂದರಿನ ಅಭಿವೃದ್ಧಿ ಕಾಮಗಾರಿಯನ್ನು 37.47. ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುತ್ತಿದೆ. ಬಂದರಿನ ಮೂರನೇ ಹಂತದ ವಿಸ್ತರಣೆ ಕಾಮಗಾರಿ ೨೦೧೪ರಲ್ಲಿ ಆರಂಭಗೊಳ್ಳಬೇಕಿದ್ದರೂ, ವಿಳಂಬವಾಗಿ ಪ್ರಸ್ತುತ 49.50 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡಿದೆ. ಈ ಎರಡೂ ಕಾಮಗಾರಿ ಪೂರ್ಣಗೊಂಡರೆ ಬಂದರಿನ ಶೇ.25ರಷ್ಟುಸಮಸ್ಯೆಗಳು ಬಗೆಹರಿಯಲಿವೆ. ಉಳಿದ ಶೇ.೭೫ರಷ್ಟುಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ಪ್ರಧಾನಮಂತ್ರಿ ಮತ್ಸ್ವ ಸಂಪದ ಯೋಜನೆ ಮೂಲಕ ಮೀನುಗಾರರ ಆದಾಯ ದ್ವಿಗುಣಕ್ಕೆ ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಮಂಗಳೂರು ಬಂದರು ಅಭಿವೃದ್ಧಿ ಯೋಜನೆ ಜತೆಗೆ ಕುಳಾಯಿ ಜೆಟ್ಟಿನಿರ್ಮಾಣಕ್ಕೆ196 ಕೋಟಿ ರೂ. ಒದಗಿಸಲಾಗಿದೆ. ಈ ಪೈಕಿ ಕೇಂದ್ರ ಸರಕಾರ 186 ಕೋಟಿ ರೂ. ರಾಜ್ಯ ಸರಕಾರ 10 ಕೋಟಿ ರೂ. ನೀಡಿದೆ. ಮುಂದಿನ ಹಂತದಲ್ಲಿ ಮಂಗಳೂರು ಬಂದರಿನಲ್ಲಿ ಹೂಳೆತ್ತುವ ಕಾಮಗಾರಿ ಮತ್ತು ಲಕ್ಷದ್ವೀಪ ಜೆಟ್ಟಿ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕಿದೆ. ಮೀನುಗಾರಿಕೆ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲು ಮೆರಿಟೈಮ್ ಬೋರ್ಡ್ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ, ಮೀನುಗಾರರು ಇಂಧನಗಳ ಮೇಲೆ ಅವಲಂಬಿತ ರಾಗಿದ್ದು, ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿಯೂ ಸರಕಾರ ಚಿಂತನೆ ನಡೆಸಬೇಕು. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಮುದ್ರ ಕಳೆ (ಸೀವೀಡ್) ಬೆಳೆಸಲು ರಾಜ್ಯ ಸರಕಾರ ಉತ್ತೇಜನ ನೀಡಬೇಕು. ಮೀನುಗಾರಿಕಾ ಇಲಾಖೆಯೇ ಡ್ರೆಜ್ಜಿಂಗ್ ಯಂತ್ರ ಖರೀದಿಸಬೇಕು ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಮೀನುಗಾರಿಕ ಇಲಾಖೆ ಉಪ ನಿರ್ದೇಶಕ ದಿಲೀಪ್ ಕುಮಾರ್, ಮೀನುಗಾರ ಮುಖಂಡರಾದ ಚೇತನ್ ಬೆಂಗ್ರೆ, ಮೋಹನ್ ಬೆಂಗ್ರೆ, ಅನಿಲ್ ಕುಮಾರ್, ವರದರಾಜ್ ಮೊದಲಾದವರಿದ್ದರು.
ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್‌ಕಳ್ಳೇರ್ ಸ್ವಾಗತಿಸಿದರು. ಮಲ್ಪೆ ಮೀನುಗಾರಿಕೆ ಬಂದರುಗಳು ಅಪರ ನಿರ್ದೇಶಕರು ಸಿದ್ದಯ್ಯ ಡಿ. ವಂದಿಸಿದರು. ಪುತ್ತೂರಿನ ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ವಂದಿಸಿದರು.


















