ಮಂಗಳೂರು:ಬಂದರು ನಗರಿಗೆ ಆಗಮಿಸಿದ ವಿಲಾಸಿ ಹಡಗು
ಬಂದರು ನಗರಿ ಮಂಗಳೂರಿಗೆ ವಿದೇಶಿ ಪ್ರವಾಸಿ ಹಡಗುಗಳ (ವಿಲಾಸಿ ಹಡಗುಗಳು) 2025-26ನೆ ಸಾಲಿನ ಭೇಟಿ ಋತು ಆರಂಭಗೊಂಡಿದ್ದು, ಪ್ರಥಮ ವಿಲಾಸಿ ಹಡಗು ಎಂಎಸ್ ಸೆವೆನ್ ಸೀಸ್ ನೇವಿಗೇಟರ್ ಆಗಮಿಸಿದೆ.
450 ಪ್ರಯಾಣಿಕರು ಮತ್ತು 360 ಸಿಬ್ಬಂದಿಯನ್ನು ಹೊತ್ತ ಐಷಾರಾಮಿ ಕ್ರೂಸ್ ಹಡಗು ಬೆಳಗ್ಗೆ 6:15ಕ್ಕೆ ನವಮಂಗಳೂರು ಬಂದರಿಗೆ ಆಗಮಿಸಿತು, ಬಹಾಮಾಸ್‌ನ ಧ್ವಜವನ್ನು ಹೊತ್ತ ಎಂಎಸ್ ಸೆವೆನ್ ಸೀಸ್ ಹಡಗು ಮರ್ಮುಗಾಂವೊ ಬಂದರಿನಿಂದ ಆಗಮಿಸಿದೆ. ಮಂಗಳೂರು ಕಸ್ಟಮ್ಸ್ ಆಯುಕ್ತೆ ವಿನಿತಾ ಶೇಖರ್ ನೇತೃತ್ವದಲ್ಲಿ ಎನ್‌ಎಂಪಿಎಯಲ್ಲಿ ಕ್ರೂಸ್ ಪ್ರವಾಸಿಗರಿಗೆ ಜಿಲ್ಲೆಯ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಆಯುಷ್ ಸಚಿವಾಲಯದ ಧ್ಯಾನ ಕೇಂದ್ರ, ಎನ್‌ಎಂಪಿಎ ಒದಗಿಸಿದ ಉಚಿತ ವೈ-ಫೈ ಸಂಪರ್ಕ ಮತ್ತು ಪ್ರವಾಸೋದ್ಯಮ ಸಚಿವಾಲಯ ಮಂಗಳೂರಿನ ಯಕ್ಷಗಾನ ಕಲಾ ಪ್ರಕಾರವನ್ನು ಚಿತ್ರಿಸುವ ಸೆಲ್ಫಿ ಸ್ಟ್ಯಾಂಡ್ ಪ್ರಯಾಣಿಕರಿಗೆ ವಿಶಿಷ್ಟವಾದ ಅನುಭವವನ್ನು ನೀಡಿತು.

ಬಳಿಕ ಪ್ರವಾಸಿಗರು ಕಾರ್ಕಳ ಗೋಮಟೇಶ್ವರ ದೇವಾಲಯ, ಮೂಡಬಿದ್ರಿಯ 1,000 ಕಂಬದ ಬಸದಿ , ಸೋನ್ಸ್ ಫಾರ್ಮ್, ಪಿಲಿಕುಳ ನಿಸರ್ಗಧಾಮ, ಕುಶಲಕರ್ಮಿ ಗ್ರಾಮ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರ್ಕೆಟ್ ಮತ್ತು ವೆಲೆನ್ಸಿಯಾದ ಟ್ರಿನಿಟಿ ಹೌಸ್ ಸೇರಿದಂತೆ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.ಪ್ರವಾಸಿಗರನ್ನು ಹೊತ್ತ ಹಡಗು ಸಂಜೆ 4:30ಕ್ಕೆ ಕೇರಳದ ಕೊಚ್ಚಿನ್‌ಗೆ ತನ್ನ ಯಾನವನ್ನು ಮುಂದುವರಿಸಿತು. 2025-26ನೆ ಸಾಲಿಗೆ ನವ ಮಂಗಳೂರು ಬಂದರಿಗೆ ಡಿಸೆಂಬರ್‌ನಿಂದ ಮೇ ತಿಂಗಳಲ್ಲಿ ಐದು ಹಡಗುಗಳು ಭೇಟಿ ನೀಡಲು ವೇಳಾಪಟ್ಟಿ ನಿಗದಿಯಾಗಿದೆ.


















