ಅಂಬಿತ್ತಡಿ : ಶೆಡ್ನಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರ
                                                ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 7ನೇ ವಾರ್ಡಿನ ಅಂಬಿತ್ತಡಿ ಎಂಬಲ್ಲಿ ಶೆಡ್ಡ್ನಲ್ಲೇ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ತನಕ ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರ ನಿರ್ಮಾಣಗೊಂಡಿಲ್ಲ. ಶೀಘ್ರದಲ್ಲೇ ಸುಸಜ್ಜಿತವಾದ ಅಂಗನವಾಡಿ ಕೇಂದ್ರ ನಿರ್ಮಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈಗಾಗಲೇ ಪಂಚಾಯತಿನಿಂದ ಫಂಡ್ ಮಂಜೂರಾಗಿದ್ದರೂ ಪಂಚಾಯತಿನ ಸ್ಥಳ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಊರವರಿಗೆ ಅಂಗನವಾಡಿಯ ಭಾಗ್ಯ ಲಭ್ಯವಾಗಲಿಲ್ಲ. ವಾರ್ಡ್ ಸದಸ್ಯೆಯ ಮುತುವರ್ಜಿಯಲ್ಲಿ ಊರವರ ಧನ ಸಹಾಯದೊಂದಿಗೆ ಖಾಸಗಿ ವ್ಯಕ್ತಿಯಿಂದ ಸ್ಥಳವನ್ನು ಖರೀದಿಸಿದ್ದರೂ ಕೆಲವೊಂದು ಕಾರಣಗಳಿಂದ ಆ ಸ್ಥಳದಲ್ಲಿ ಕಟ್ಟಡಕ್ಕೆ ಅಧಿಕಾರಿಗಳು ಅನುಮತಿ ನೀಡದೆ ಇರುವುದು ಸ್ಥಳೀಯರ ಬೇಡಿಕೆಗೆ ಹಿನ್ನೆಡೆಯಾಗಿದೆ.

ಈಗ ತಾತ್ಕಾಲಿಕವಾಗಿ ಇರುವ ಅಂಗನವಾಡಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಶೆಡ್ ನಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕುವುದನ್ನು ನೋಡಿದರೆ ಎಷ್ಟೇ ಕಲ್ಲಿನ ಮನಸ್ಸಾದರೂ ಕರಗಿ ಹೋಗಬಹುದು. ಈ ಸ್ಥಳದಲ್ಲಿ ಅಂಗನವಾಡಿ ಸಿಗಬಾರದೆಂಬ ದುರುದ್ದೇಶದಿಂದ ಕೆಲವೊಂದು ಕಾಣದ ಕೈಗಲು ಇಲ್ಲಿ ಸಕ್ರಿಯವಾಗಿರುವುದಾಗಿ ಊರವರು ಆರೋಪಿಸುತಿದ್ದಾರೆ.
ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಅಂಬಿತ್ತಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಂಗನವಾಡಿಯ ಶೋಚನೀಯಾವಸ್ಥೆಯನ್ನು ವೀಕ್ಷಿಸಲು ಮಂಜೇಶ್ವರ ಪೀಪಲ್ಸ್ ಯೂನಿಯನ್ ಸಂಘಟನೆ ಪದಾಧಿಕಾರಿಗಳು ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಅಂಗನವಾಡಿಗೆ ಬೇಕಾಗಿ ಗುರುತಿಸಿಕೊಂಡಿರುವ ಸ್ಥಳದಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಹೈಟೆಕ್ ಅಂಡರ್ ಅಂಗನವಾಡಿಯನ್ನು ಕೂಡಲೇ ನಿರ್ಮಿಸಿಕೊಡಲು ಸಂಬಂಧಪಟ್ಟವರು ಕೂಡಲೇ ಮುಂದಾಗಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.



							
							
							














