ಮೆಹೆಂದಿ ಶಾಸ್ತ್ರದಂದು ನಾಪತ್ತೆಯಾಗಿದ್ದ ವರ ಮನೆಗೆ ವಾಪಾಸ್!
ಉಳ್ಳಾಲ: ಮದುವೆ ಮೆಹೆಂದಿಯಂದು ನಾಪತ್ತೆಯಾಗಿದ್ದ ವರ ಮನೆಗೆ ವಾಪಸ್ಸಾಗಿದ್ದಾನೆ. ನಾಪತ್ತೆಯಾದ ಹಲವು ದಿನಗಳ ನಂತರ ಬಳ್ಳಾರಿಯಲ್ಲಿ ಇರುವುದಾಗಿ ಸಹೋದರಿಗೆ ಕರೆ ಮಾಡಿ ತಿಳಿಸಿದ ನಂತರ ಜೂ.16 ರಂದು ಕೊಣಾಜೆ ಠಾಣೆಗೆ ಬಂದು ಮನೆಗೆ ವಾಪಸ್ಸಾಗಿದ್ದಾರೆ.
ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಎಂಬವರ ಪುತ್ರ ಕಿಶನ್ ಶೆಟ್ಟಿ ಮೇ 31ರಂದು ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲು ತೆರಳಿದ್ದವರು ನಾಪತ್ತೆಯಾಗಿದ್ದರು. ಇದರಿಂದಾಗಿ ನಿಗದಿಯಾಗಿದ್ದ ಮದುವೆಯೂ ಮುರಿದುಬಿದ್ದಿತ್ತು. ಬಳ್ಳಾರಿ, ಬೆಂಗಳೂರು ಬಳಿ ತಂಗಿದ್ದ ಕಿಶನ್ ವಾಪಸ್ಸಾಗಿದ್ದಾರೆ. ಕಿಶನ್ ಶೆಟ್ಟಿ ಕೇರಳ ,ಕುಂಜತ್ತೂರು ಬಳಿಯ ಅನ್ಯ ಜಾತಿಯ ಯುವತಿಯನ್ನು ಕಾಲೇಜು ಸಹಪಾಠಿಯಾಗಿದ್ದಾಗಲೇ ಪ್ರೀತಿಸಲಾರಂಭಿಸಿದ್ದರೂ ಇತ್ತೀಚೆಗಷ್ಟೇ ಬೇರೆ ಯುವತಿಯ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಆ ಬಳಿಕ ಪ್ರೀತಿಸಿದ ಯುವತಿಯನ್ನು ತಿರಸ್ಕರಿಸುತ್ತಾ ಬಂದಿದ್ದ ಎನ್ನಲಾಗಿದ್ದು ಅದರಿಂದ ಕೆರಳಿದ ಯುವತಿ ತನ್ನ ಬಿಟ್ಟು ಬೇರೆ ಯಾರನ್ನೇ ಮದುವೆಯಾದರೂ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹಿಂಜರಿಯಲಾರೆ ಅಥವಾ ಮದುವೆ ತಡೆಯುವುದಾಗಿ ಬೆದರಿಕೆ ಒಡ್ಡಿದ್ದಳು ಎನ್ನಲಾಗಿದ್ದು ಹೆದರಿದ ಕಿಶನ್ ಮೆಹಂದಿಶಾಸ್ತ್ರದಂದೇ ನಾಪತ್ತೆಯಾಗಿದ್ದರು.