ಮೂಡುಬಿದಿರೆ: ಎ.2ರಿಂದ 5ರವರೆ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಶ್ರೀ ಕ್ಷೇತ್ರ ಬನ್ನಡ್ಕ

ಮೂಡುಬಿದಿರೆ: ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ತಾಲೂಕಿನ ವಿಶೇಷವಾದ ಕ್ಷೇತ್ರ ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ನೇಮೋತ್ಸವವು ಸಂಭ್ರಮದಿಂದ ನಡೆಯಲಿದೆ.
ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣರ ನೇತ್ರತ್ವದಲ್ಲಿ ಏ.2 ರಂದು ಬೆಳಿಗ್ಗೆ ನೂತನ ಧ್ವಜಸ್ತಂಭ ಪ್ರತಿಷ್ಠೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಯ ಗಣಹೋಮ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗತ್ಪಾಲ್ ಯಸ್.ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಪ್ರಿಲ್ 2ರಿಂದ 5ರವರೆಗೆ ಬಹಳ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಕ್ಷೇತ್ರದ ನೂತನ ಗೋಪುರ ನಿರ್ಮಾಣ, ತೀರ್ಥಬಾವಿ, ಪಂಜುರ್ಲಿ ಗುಡಿ, ಅಂಗಣಕ್ಕೆ ಕಲ್ಲು ಹಾಸುವುದು,ಕ್ಷೇತ್ರ ಪಾಲನ ಕಟ್ಟೆ ರಚನೆ, ಆವರಣಗೋಡೆ ಇನ್ನಿತರವೆಂಬಂತೆ ಸುಮಾರು 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದ ಅವರು ಬನ್ನಡ್ಕ ಕ್ಷೇತ್ರ, ದೈವಗಳ ಬಗ್ಗೆ ಮಾಹಿತಿಯನ್ನು ನೀಡಿದರು.


ಎಪ್ರಿಲ್ 2 ರಂದು ಸಂಜೆ ವಾಸ್ತುಪೂಜೆ, ಗಣಹೋಮ, ಮಾರ್ನಾಡು ಬೀಡಿನಲ್ಲಿ ರಾತ್ರಿ ನವಕ ಪ್ರಧಾನ ಹೋಮ ನಡೆಯಲಿದೆ. ಎಪ್ರಿಲ್ 3ರಂದು ಬೆಳಿಗ್ಗೆ ಮಾರ್ನಾಡು ಬೀಡಿನಿಂದ ಶ್ರೀ ಕ್ಷೇತ್ರ ಬನ್ನಡ್ಕಕ್ಕೆ ಬನ್ನಡ್ಕತಾಯಿ ಭಂಡಾರ ತರುವುದು, ಸಾಯಂಕಾಲ ಧ್ವಜಸ್ತಂಭ, ಆದಿವಾಸ ದೈವಗಳ ಬಿಂಬಾದಿವಾಸ-ಮಂಡಲ ರಚನೆ ಕಲಶ ಪೂಜೆ ನಡೆಯಲಿದೆ. ಎಪ್ರಿಲ್ 4ರಂದು ರಾತ್ರಿ ವರ್ಷಾವಧಿ ನೇಮೋತ್ಸವ ಎಂದು ತಿಳಿಸಿದರು.


ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನ ಮಠದ ಭಾರತಭೂಷಣ ಡಾ.ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್.ಬಲ್ಲಾಳ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ ವಾಸುದೇವ ಭಟ್ ಭಾಗವಹಿಸಲಿದ್ದಾರೆ. ಸನ್ಮಾನ : ಎಸ್‍ಕೆಎಫ್‍ನ ಆಡಳಿತ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್, ರಾಜೇಂದ್ರ ಬಲ್ಲಾಳ್ ಕಾರ್ಕಳ, ಅಮರನಾಥ ಶೆಟ್ಟಿ ಹಂಡಿಂಜೆಗುತ್ತು, ದಿನೇಶ್ ಮಾರ್ನಾಡು, ಹರೀಶ್ ಹೆಗ್ಡೆ ಪಡುಮಾರ್ನಡು, ಎಸ್‍ಕೆಡಿಆರ್‍ಡಿಪಿ ಯೋಜನಾಧಿಕಾರಿ ಸುನೀತ ಇವರನ್ನು ಸನ್ಮಾನಿಸಲಾಗುವುದು ಎಂದ ಅವರು ಸಭಾ ಕಾರ್ಯಕ್ರಮದ ನಂತರ ಯಕ್ಷಸಿರಿ ಕಲಾವೇದಿಕೆ ಬನ್ನಡ್ಕ ಇವರಿಂದ ” ಸಾಯಜ್ಯ ಸಂಗ್ರಾಮ ಮತ್ತು ಕಂಸ ವಧೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಕಾರ್ಯಕ್ರಮದ ಬಗ್ಗೆ ಸವಿವಾರವಾದ ಮಾಹಿತಿಯನ್ನು ನೀಡಿದರು.


ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ ದಾನಿಗಳ ಸಹಕಾರದಿಂದ ನಡೆಯುವ ಬನ್ನಡ್ಕ ಕ್ಷೇತ್ರದ ಅಬಿವೃದ್ಧಿ ಕಾರ್ಯಗಳು ನಡೆದಿದ್ದು ತಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದರು. ಅನುವಂಶಿಕ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್ ಪ್ರಧಾನ ಕಾರ್ಯದರ್ಶಿ ಜಗತ್ಪಾಲ್ ಎಸ್.ಹೆಗ್ಡೆ ಮತ್ತು ಕಾರ್ಯದರ್ಶಿ ಹರೀಶ್ ಹೆಗ್ಡೆ ಉಪಸ್ಥಿತರಿದ್ದರು.

Related Posts

Leave a Reply

Your email address will not be published.