ಮೂಲ್ಕಿ: ಬೈಕ್-ಕಾರು ನಡುವೆ ಅಪಘಾತ ಯುವತಿ ಮೃತ್ಯು
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಹೊರ ವಲಯದ ಮೂಲ್ಕಿ “ವಿಜಯ ಸನ್ನಿಧಿ” ಜಂಕ್ಷನ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹ ಸವಾರೆ ಕೊನೆಯುಸಿರೆಳೆದು, ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.
ಮೃತಪಟ್ಟವರನ್ನ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಬಾಕ್ರಬೈಲು ಕೊರುಂಗ್ ಮನೆ ನಿವಾಸಿ ಪ್ರಗತಿಪರ ಕೃಷಿಕರೂ, ಪಾತೂರಿನಲ್ಲಿ ಅಕ್ಕಿಯ ಮಿಲ್ ಮಾಲಕರಾಗಿರುವ, ಜಯರಾಮ ಶೆಟ್ಟಿ ಮತ್ತು ಸುಭಿತಾ ದಂಪತಿಯ ಪುತ್ರಿ ಪ್ರೀತಿಕಾ ಶೆಟ್ಟಿ (21) ಎಂದು ಗುರುತಿಸಲಾಗಿದೆ. ಪ್ರೀತಿಕಾ ಶೆಟ್ಟಿ ಒಡಿಯೂರು ಶ್ರೀ ವಿವಿದ್ದೋದ್ದೇಶ ಸಹಕಾರಿ ಬ್ಯಾಂಕ್ ಸುರತ್ಕಲ್ ಬ್ರಾಂಚ್ ನಲ್ಲಿ ಉದ್ಯೋಗಿಯಾಗಿದ್ದು, ನಿನ್ನೆ ಬ್ಯಾಂಕ್‌ಗೆ ರಜೆ ಹಾಕಿ ಉಡುಪಿ ದೇವಸ್ಥಾನಕ್ಕೆ ತೆರಳಿದ್ದು, ಸಂಜೆ ಮರಳಿ ಬರುವ ವೇಳೆ ಮೂಲ್ಕಿಯಲ್ಲಿ ಈ ದುರ್ಘಟನೆ ನಡೆದಿದೆ. ಗಾಯಾಳು ಬೈಕ್ ಸವಾರ ಬಂಟ್ವಾಳ ತಾಲೂಕು ಅರಂತೋಡಿ ಬಾಳೆಪುಣಿ ನಿವಾಸಿ ಮನ್ವಿತ್ ಶೆಟ್ಟಿ (21) ಎಂದು ಗುರುತಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತಕ್ಕೀಡಾದ ಎರಡು ವಾಹನಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಪೊಲೀಸರು ಎಸಿಪಿ ಗೀತಾ ಕುಲಕರ್ಣಿ, ಇನ್‌ಸ್ಪೆಕ್ಟರ್ ಶರೀಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.