ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು :ಎನ್. ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

“ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಂದ ಕೇವಲ ಕೆಲಸ ಮಾಡಿಸಲು ಇರುವುದಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳು ಸಾಮಾಜಿಕವಾಗಿ ತಾವು ಹೇಗೆ ಬದುಕಬೇಕು, ಜೀವನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಮೆಟ್ಟಿ ನಿಲ್ಲುವುದು, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು, ಸಹಬಾಳ್ವೆಯ ಮಹತ್ವ ಮೊದಲಾದವುಗಳನ್ನು ತಿಳಿಸಿಕೊಡುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಯ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಎನ್‍ಎಸ್‍ಎಸ್ ದಾರಿದೀಪವಾಗಬಲ್ಲ ಜೀವನ ಪಾಠಗಳನ್ನು ತಿಳಿಸಿಕೊಡುತ್ತದೆ” ಎಂದು ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಕಾರ್ಯಾಧ್ಯಕ್ಷರಾದ ಶ್ರೀ ಸಚ್ಚಿದಾನಂದ ಶೆಟ್ಟಿ ನುಡಿದರು.

ನಂತೂರಿನ ಡಾ.ಎನ್ ಎಸ್ ಎ ಎಂ ಪದವಿಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳಿಗಾಗಿ ಶಂಬೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭ ಪರಂಗಿಪೇಟೆಯ ಸೇವಾಂಜಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೃಷ್ಣ ಕುಮಾರ ಪೂಂಜ ಅವರು ಅಕ್ಕಿಯ ಕಲಶದಲ್ಲಿ ಹಿಂಗಾರ ಅರಳಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ಶ್ರಮದಾನದ ಉದ್ಘಾಟನೆಯನ್ನು ನೆರವೇರಿಸಿದ ನರಿಕೊಂಬು ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀ ಸಂತೋಷ್ ಮಾತನಾಡಿ ವಿದ್ಯಾರ್ಥಿಗಳಿಗೆ ತ್ಯಾಗ ಹಾಗೂ ಸೇವಾ ಮನೋಭಾವನೆಯನ್ನು ತಿಳಿಸಿಕೊಡುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ನವೀನ್ ಶೆಟ್ಟಿ ಕೆ. ಮಾತನಾಡಿ “ಅನುಭವಗಳೇ ನಿಜವಾದ ಶಿಕ್ಷಣ. ಅಂತಹ ಜೀವನದ ಕಷ್ಟ ಸುಖಗಳ ಅನುಭವವನ್ನು ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ ನೀಡುತ್ತದೆ ಎಂದರು.

ಬೊಂಡಾಲ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಶ್ರೀ ಕಮಲಾಕ್ಷ, ಬಿ.ಸಿ ರೋಡಿನ ಪದ್ಮಶ್ರೀ ಎಲೆಕ್ಟ್ರಿಕಲ್ಸ್ ನ ಮಾಲಕ ಶ್ರೀ ಪದ್ಮನಾಭಮಯ್ಯ ಶೇಡಿ ಗುರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕರಾದ ಶ್ರೀ ಯಶೋಧರ ಬಂಗೇರ, ಶೇಡಿಗುರಿ ದುರ್ಗಾಪರಮೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸೀತಾ ಆನಂದ ಪೂಜಾರಿ, ಬಂಟ್ವಾಳ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀ ಜಯಾನಂದ ಶಂಬೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧೀರ್ ನಿರ್ಮಲ್, ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಅನ್ನಪೂರ್ಣ ನಾಯಕ್, ಶ್ರೀ ಕಮಲಾಕ್ಷ, ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕ ಸುದೀಪ್ ರೈ, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ, ಸಹಯೋಜನಾಧಿಕಾರಿಗಳಾದ ಶ್ರೀಮತಿ ಮೀರಾ ಕ್ರಾಸ್ತ, ಕಾರ್ತಿಕ್ ನಾಯಕ್, ವಿದ್ಯಾಧರ್ ಠಾಕುರ್, ಮಂಜುಲೇಷ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಸ್ವಾಗತಿಸಿದರು, ಶ್ರೀಮತಿ ಗೀತಾ ವಂದಿಸಿದರು, ಶ್ರೀ ಟಿ.ವಿ. ಗಿರಿ ನಿರ್ವಹಿಸಿದರು.