ಪಡುಬಿದ್ರಿ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ವ್ಯಕ್ತಿಯೋರ್ವರು ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಜಾನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಮೂಳೂರು ರಾಜಮನೆ ನಿವಾಸಿ ಸುಭಾಷ್ ಚಂದ್ರ ಪೂಜಾರಿ(68), ಈ ಭಾಗದ ಬಿಲ್ಲವ ಸಮಾಜದ ಒಂದನೇ ಗುರಿಕಾರರಾಗಿದ್ದು, ಕುಟುಂಬದ ದೈವದ ಆರಾಧಕರಾಗಿ ಸೇವೆ ನಡೆಸುತ್ತಿದ್ದ ಇವರು ಪಿಗ್ಮಿ ಸಂಗ್ರಹ ವೃತ್ತಿ ನಡೆಸಿ ಗೌರವಯುತವಾಗಿ ಜೀವನ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಕೈ ನಡುಕ ಸಮಸ್ಯೆ ಅವರನ್ನು ಬಾಧಿಸುತ್ತಿದ್ದು ಪಿಗ್ಮಿ ಸಂಗ್ರಹ ವೃತ್ತಿಗೂ ಅಡಚನೆಯಾಗಿತ್ತು, ಅದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ತನ್ನ ಸ್ಕೂಟರ್ ಗೆ ಮತ್ತೊಂದು ದ್ವಿಚಕ್ರವಾಹನ ಡಿಕ್ಕಿಯಾದ ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
ಬುಧವಾರ ಮುಂಜಾನೆ ನಾಲ್ಕರ ಸುಮಾರಿಗೆ ನಿತ್ಯದಂತೆ ಮನೆಯಿಂದ ಹೊರ ನಡೆದ ಇವರು ವಾಕಿಂಗ್ ಗೆ ಹೋಗಿರ ಬಹುದೆಂಬುದಾಗಿ ಮನೆಮಂದಿ ತಿಳಿದಿದ್ದರು, ಸಮಯ ಮೀರಿದರೂ ಬಾರದಿದ್ದಾಗ ಹುಡುಕಾಟ ನಡೆಸಿದ್ದು, ಬಿಲ್ಲವ ಸಂಘದ ಮುಂಭಾಗದ ಮೃತರ ಸಹೋದರನಿಗೆ ಸಂಬಂಧಪಟ್ಟ ಜಾಗದಲ್ಲಿದ್ದ ಬಾವಿಯ ಸಮೀಪ ಚಪ್ಪಲಿ ಪತ್ತೆಯಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂದ ಕಾಪು ಪೊಲೀಸರು ಸಾರ್ವಜನಿಕರ ನೆರವಿನಿಂದ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.