ಏ.8ರಂದು ಪಣಪಿಲದಲ್ಲಿ ಜಯ ವಿಜಯ ಜೋಡುಕರೆ ಕಂಬಳ
ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ಹದಿಮೂರನೇ ವರುಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಏಪ್ರಿಲ್ 8ರಂದು ಸಂಜೆ ನಡೆಯಲಿದೆ ಎಂದು ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಅಶ್ವತ್ಥ್ ಪಣಪಿಲ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

4 ಎಕರೆ ಜಾಗದಲ್ಲಿ ಕಂಬಳ ನಡೆಯಲಿದ್ದು, ನೂತನವಾಗಿ 133.5 ಮೀ ಉದ್ದದ ಕರೆ ನಿರ್ಮಾಣಗೊಂಡಿದೆ. ಕೋಣಗಳನ್ನು ಕಟ್ಟಲು ತಂಪಾದ ಜಾಗ, ಉತ್ತಮ ನೀರಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾಯಂಕಾಲ 4ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಉದ್ಘಾಟಿಸುವರು.
ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್, ಅಳಿಯೂರು ಮಜಲೋಡಿಗುತ್ತು ಪ್ರಮೋದ್ ಆರಿಗ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ವಿ.ಸುನೀಲ್ ಕುಮಾರ್ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ಹರೀಶ್ ಪೂಂಜ, ಸುದರ್ಶನ್ ಮೂಡುಬಿದಿರೆ, ಮಂಜುನಾಥ ಭಂಡಾರಿ, ಕೆ.ಅಭಯಚಂದ್ರ ಜೈನ್ ಮೊದಲಾದವರು ಭಾಗವಹಿಸುವರು.ಹಗ್ಗ ಕಿರಿಯ,ನೇಗಿಲು ಕಿರಿಯ ಹಾಗೂ ನೇಗಿಲು ಅತೀ ಕಿರಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಸುಮಾರು 160ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ.
ವಿಜೇತ ಕೋಣಗಳಿಗೆ ಚಿನ್ನದ ಪದಕದೊಂದಿಗೆ ಗೌರವ ಸನ್ಮಾನ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಯುವರಾಜ್ ಹೆಗ್ಡೆ ನಂದೊಟ್ಟು,ಜೊತೆ ಕಾರ್ಯದರ್ಶಿ ದೀಕ್ಷಿತ್ ಪಣಪಿಲ, ಸದಸ್ಯ ಸಚಿನ್ ಪಣಪಿಲ ಉಪಸ್ಥಿತರಿದ್ದರು.



















