ಕನ್ನಡ ಸಾಹಿತ್ಯ ಸಮ್ಮೇಳನ : ಬಹಿರಂಗ ಅಧಿವೇಶನ; ನಿರ್ಣಯ (ಠರಾವು) ಮಂಡನೆ
ಉಜಿರೆ, ಫೆ.5: ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ಬಹಿರಂಗ ಅಧಿವೇಶನ ನಡೆಯಿತು.
ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಹಾಗೂ ಗೌರವ ಕೋಶಾಧ್ಯಕ್ಷ ಬಿ. ಐತಪ್ಪನಾಯ್ಕ ಹತ್ತು ನಿರ್ಣಯಗಳನ್ನು ಮಂಡಿಸಿದರು:
ಜಿಲ್ಲೆಯಲ್ಲಿ ಮಂಜೂರಾದ ಕನ್ನಡ ಭವನಗಳ ಹೊರತಾಗಿ ಉಳಿದ 6 ತಾಲೂಕುಗಳಿಗೂ ಶೀಘ್ರದಲ್ಲಿ ಕನ್ನಡ ಭವನ ಮಂಜೂರಾಗಬೇಕು;
ಅನುದಾನ ಹಾಗೂ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳ ಕಟ್ಟಡ, ಪೀಠೋಪರಣ, ಶಿಕ್ಷಕರ ಕೊರತೆ, ಉತ್ತಮ ಶಿಕ್ಷಣ ಮುಂತಾದವು ಸುಧಾರಣೆ ಹೊಂದಬೇಕು. ಎಲ್ಲಾ ಸರ್ಕಾರಿ ಶಾಲೆಗಳಿಗೆ ತಾರತಮ್ಯವಿಲ್ಲದೆ ಅನುದಾನ ದೊರೆಯಬೇಕು;
ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾ ಕಾರಂಜಿ ಪ್ರತ್ಯೇಕವಾಗಿ ನಡೆಸಬೇಕು;
ಪದವಿಪೂರ್ವ ಶಿಕ್ಷಣದಲ್ಲಿ ಐಚ್ಛಿಕ ವಿಷಯವಾಗಿ ಕನ್ನಡವನ್ನು ಅಧ್ಯಯನ ಮಾಡಲು ಅವಕಾಶ ಒದಗಿಸಬೇಕು. ಪದವಿ ಶಿಕ್ಷಣದಲ್ಲಿ ಎಲ್ಲಾ ಕಾಲೇಜುಗಳಲ್ಲಿ ಕನ್ನಡ ವಿಷಯವನ್ನು ಐಚ್ಛಿಕವಾಗಿ ಕಡ್ಡಾಯ ಮಾಡಬೇಕು. ರಾಜ್ಯದಲ್ಲಿ ಪದವಿ ಶಿಕ್ಷಣದಲ್ಲಿ ಕನ್ನಡ ಐಚ್ಛಿಕ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಬೇಕು;
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಸಭೆಗೆ ಜಿಲ್ಲಾಡಳಿತವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನೂ ಆಹ್ವಾನಿಸಬೇಕು ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ಇರುವ ಸ್ಥಾನಮಾನವನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೂ ನೀಡಬೇಕು;
ರಾಜ್ಯೋತ್ಸವ ಸಭೆಗಳಿಗೆ ಹಾಗೂ ರಾಜ್ಯೋತ್ಸವ ಆಯ್ಕೆ ಸಮಿತಿ ಸಭೆಗಳಿಗೆ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನೂ ಆಹ್ವಾನಿಸಬೇಕು.
ಹೀಗೆ ನಿರ್ಣಯ(ಠರಾವು)ಗಳನ್ನು ಮಂಡಿಸುವ ಮೂಲಕ ಈ ಎಲ್ಲಾ ನಿರ್ಣಯಗಳನ್ನು ಜಿಲ್ಲಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಿದ್ದೇವೆ ಎಂದು ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ. ಐತಪ್ಪನಾಯ್ಕ ಅವರು ಕನ್ನಡಿಗರಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಅವರು ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ವ್ಯಾಪ್ತಿಯ ಕನ್ನಡ ಮಾಧ್ಯಮದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬೇಕು. ಈ ಮೂಲಕ ಮುಂದಿನ ಪೀಳಿಗೆಯವರು ಕನ್ನಡ ಸಾಹಿತ್ಯ ಅಭ್ಯಾಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಹೇಮಾವತಿ ವೀ. ಹೆಗ್ಗಡೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು. ದ.ಕ. ಕ.ಸಾ.ಪ. ಕಾರ್ಯಕಾರಿಣಿ ಸದಸ್ಯ ಮೋಹನದಾಸ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.
ವರದಿ: ಪೂಜಾ ವಿ. ಹಂದ್ರಾಳ, ತೇಜಶ್ವಿನಿ ಕಾಂತರಾಜ್
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ
ಚಿತ್ರ: ಸಮರ್ಥ್ ಭಟ್, ಪ್ರಥಮ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ
7864: ಐತ್ತಪ್ಪ ನಾಯ್ಕ್


















