ಬಿಜೆಪಿಯವರ ಅಪಪ್ರಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹೋರಾಡಬೇಕಿದೆ : ಯು.ಟಿ ಖಾದರ್ ಹೇಳಿಕೆ

ಉಳ್ಳಾಲ: ಬಿಜೆಪಿಯವರ ಅಪಪ್ರಚಾರದ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಎದ್ದು ನಿಂತು ಹೋರಾಡಬೇಕು. ಚುನಾವಣೆ ಬರುವವರೆಗೂ ಕಾಯದೇ, ಈಗಿನಿಂದಲೇ ತಯಾರಾಗುವ ವಿಚಾರಗಳಾಗಲಿ. ವೋಟರ್ ಲಿಸ್ಟ್ ಸರಿಯಾಗಿದ್ದಲ್ಲಿ ಅಲ್ಲಿ ಯಶಸ್ವೀ ಕಾರ್ಯನಿರ್ವಹಿಸಲು ಸಾಧ್ಯ. ಡಿಲೀಷನ್ ಲಿಸ್ಟ್‍ನಲ್ಲಿ ಇರುವಂತಹ ಹೆಸರುಗಳನ್ನು ಕೌಂಟರ್ ಚೆಕ್ ಮಾಡಬೇಕಿದೆ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.

ಅವರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರ, ಮುಡಿಪು ಬ್ಲಾಕ್ ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಇದರ ಆಶ್ರಯದಲ್ಲಿ ಮುಡಿಪು ಹೂಹಾಕುವಕಲ್ಲು ಖಾಸಗಿ ಸಭಾಂಗಣದಲ್ಲಿ ಬುಧವಾರ ಜರಗಿದ ಪಕ್ಷ ಸಂಘಟನೆಯ ಕುರಿತು ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

200 ಮನೆಗಳಿಗೆ ಒಂದು ಬೂತ್ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮತದಾರರ ಪಟ್ಟಿಯ ಪರಿಷ್ಕರಣೆ ಬೂತ್ ಕಾರ್ಯಕರ್ತರು ಮಾಡಬೇಕಿದೆ. 18 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಮತದಾನ ಮಾಡುವ ಅವಕಾಶ ಕಲ್ಪಿಸಬೇಕು. ಜನವರಿ, ಫೆಬ್ರವರಿ, ಮಾಚ್9 ವರೆಗೂ 18 ವರ್ಷಗಳಾದವರನ್ನು ಮತದಾನದ ಹಕ್ಕು ಒದಗಿಸಲು ಸಾಧ್ಯ. ಅವರನ್ನು ದೂರವಾಣಿ ಮೂಲಕ ಸಂಪರ್ಕದಲ್ಲಿಟ್ಟುಕೊಂಡು ಸೇರಿಸುವ ಕಾರ್ಯವಾಗಬೇಕು. ಮಾಧ್ಯಮ ಗಳನ್ನು ನೋಡಿಕೊಂಡು ಮನೆಯಲ್ಲೇ ಉಳಿಯುವವರು ಅನೇಕರಿದ್ದಾರೆ, ಅವರನ್ನು ಜಾಗೃತಿಗೊಳಿಸುವ ಕಾರ್ಯಗಳಾಗಬೇಕು ಎಂದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ ಮಾತನಾಡಿ, ಪಂಚಾಯತ್ ರಾಜ್ ಹಾಗೂ ಪಕ್ಷ ಒಂದೇ ಆಗಿರುತ್ತದೆ. ಪಂಚಾಯತ್ ರಾಜ್ ಹಕ್ಕುಗಳಿಗೆ ಚ್ಯುತಿಯಾದಾಗ ಉಳ್ಳಾಲದಿಂದ ಆರಂಭ ಕಂಡ ಹೋರಾಟ ರಾಜ್ಯಕ್ಕೆ ವ್ಯಾಪಿಸಿತ್ತು. 15,000 ಮತದಾರರ ಡಿಲೀಷನ್ ಮಾಡಿರುವುದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ನಡೆಸಿರುವ ಷಡ್ಯಂತ್ರ. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಗಳಾಗದಂತೆ ನೋಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಜಿ.ಪಂ ಮಾಜಿ ಸದಸ್ಯ ತುಂಬೆ ಪ್ರಕಾಶ್ ಶೆಟ್ಟಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷ ಗಣೇಶ್ ನಾಯ್ಕ್, ಬಂಟ್ವಾಳ ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ , ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್ ಅಬ್ದುಲ್ಲಾ, ನಾಸಿರ್ ನಡುಪದವು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.