ಅಂಬಲಪಾಡಿ ನೀರಿನ ಸಮಸ್ಯೆ: ಪಂಚಾಯತ್ ಅಧ್ಯಕ್ಷರ ಹೇಳಿಕೆ ವಿರುದ್ಧ ಗ್ರಾಮಸ್ಥರು ಗರಂ
ಉಡುಪಿ: ಉಡುಪಿ ಜಿಲ್ಲೆಯ ಅಂಬಲಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಗ್ರಾಮದ ಮಹಿಳೆಯರು ಪಂಚಾಯತ್ ಗೆ ಮುತ್ತಿಗೆ ಹಾಕಿದ್ದರು. ಅಲ್ಲಿನ 90ಕ್ಕು ಅಧಿಕ ಮನೆಗಳಿಗೆ ನೀರು ಸಿಗದಿರುವ ಪರಿಣಾಮ, ನೀರು ಪೂರೈಕೆ ಮಾಡಬೇಕು ಎಂದು ಕೊಡ ಹಿಡಿದು ಪಂಚಾಯತ್ ಗೆ ಮುತ್ತಿಗೆ ಹಾಕಿದ್ದ ಮಹಿಳೆಯರು ಮತ್ತು ಗ್ರಾಮಸ್ಥರು ತಮ್ಮ ಪ್ರತಿಭಟನೆ ದಾಖಲಿಸಿದ್ದರು. ಆದರೆ ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೋಹಿಣಿ ಹೇಳಿಕೆ ನೀಡಿದ್ದು ಇದರ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ.
ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷರ ಉಡಾಫೆ ಹೇಳಿಕೆಗೆ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ. ನಮಗೆ ನೀರಿನ ಸಮಸ್ಯೆ ಇದ್ದು ಅದಕ್ಕಾಗಿ ಪ್ರತಿಭಟನೆ ನಡೆಸಿದ್ದೆವು. ಗ್ರಾಮ ಪಂಚಾಯತ್ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು. ಆದರೆ ಗ್ರಾಮಸ್ಥರ ಪ್ರತಿಭಟನೆಯನ್ನೇ ರಾಜಕೀಯ ಪ್ರೇರಿತ ಎಂದು ಹೇಳುವ ಮೂಲಕ ನಮ್ಮ ಸಮಸ್ಯೆಯನ್ನೇ ಪಂಚಾಯತ್ ಅಧ್ಯಕ್ಷರು ಕಡೆಗಣಿಸಿದ್ದಾರೆ. ಗ್ರಾಮಕ್ಕೆ ಮೂರು ದಿನಕ್ಕೊಮ್ಮೆ ನೀರು ಬಿಡುತ್ತೇವೆ ಎಂದು ಪಂಚಾಯತ್ ನವರು ಹೇಳಿದ್ದರು. ಆದರೆ ತಮ್ಮ ಮಾತಿನಂತೆ ನಡೆದುಕೊಳ್ಳದೆ ಈಗ ಗ್ರಾಮಸ್ಥರ ಪ್ರತಿಭಟನೆಯನ್ನೇ ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣ ಪಂಚಾಯತ್ ಅಧ್ಯಕ್ಷರು ತಮ್ಮಹೇಳಿಕೆಯನ್ನು ವಾಪಾಸು ಪಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.