ಉಳ್ಳಾಲ|| ಆಧಾರ್ ಇಲ್ಲದ ವಿದ್ಯಾರ್ಥಿನಿಯರನ್ನು ಬಸ್ನಿಂದ ಕೆಳಗಿಳಿಸಿದ ನಿರ್ವಾಹಕ: ಸ್ಥಳೀಯರಿಂದ ತರಾಟೆ
ಉಳ್ಳಾಲ: ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ನರ್ಮ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರನ್ನ ಅರ್ಧ ದಾರಿಯಲ್ಲೇ ಇಳಿಸಿದ ಬಸ್ ನಿರ್ವಾಹಕನ್ನು ತರಾಟೆಗೆ ತೆಗೆದುಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ.
ಮಂಗಳೂರಿನಿಂದ ಕುಂಪಲ ನಡುವೆ ಓಡಾಟ ನಡೆಸುವ ಸರಕಾರಿ ನರ್ಮ್ ಬಸ್ಸಿನ ನಿರ್ವಾಹಕ ಹುಸೇನ್ ಸಾಬ್ ಐ ಹಳ್ಳೂರ ಎಂಬವರು ಎರಡನೇ ಮತ್ತು ಮೂರನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದಕ್ಕೆ ನಿಮಗೆ ಉಚಿತ ಪ್ರಯಾಣವಿಲ್ಲವೆಂದು ಹಣ ಕೇಳಿದ್ದಾರೆ. ಹಣ ನೀಡದಕ್ಕೆ ಬಸ್ಸಿನಿಂದ ಅರ್ಧ ದಾರಿಯಲ್ಲೇ ಕೆಳಗೆ ಇಳಿಸಿ ಅಮಾನವೀಯತೆ ಮರೆದಿದ್ದಾರೆ.

ಬಸ್ಸಿನ ಖಾಯಂ ನಿರ್ವಾಹಕ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಕೇಳುತ್ತಿರಲಿಲ್ಲವಂತೆ ಹಾಗಾಗಿ ವಿದ್ಯಾರ್ಥಿನಿಯರು ಆಧಾರ್ ತಂದಿರಲಿಲ್ಲ. ಖಾಯಂ ನಿರ್ವಾಹಕ ರಜೆ ಮಾಡಿದ್ದರಿಂದ ಹುಸೇನ್ ಸಾಬ್ ಬದಲಿ ಕರ್ತವ್ಯದಲ್ಲಿದ್ದರು. ಘಟನೆಯನ್ನು ಬಸ್ಸಿನಲ್ಲಿ ಕುಳುತಿದ್ದ ಕುಂಪಲ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಗುಲಾಬಿ ಅವರು ಗಮನಿಸಿದ್ದಾರೆ.
ಸಂಜೆ ಸ್ಥಳೀಯರು ಕುಂಪಲ ಶಾಲೆಯ ಎದುರು ಬಸ್ ತಡೆದು ನಿಲ್ಲಿಸಿ ನಿರ್ವಾಹಕರನ್ನು ತರಾಟೆಗೆತ್ತಿದ್ದಾರೆ.ಸ್ಥಳೀಯರಾದ ಯಶವಂತ್ ಅವರು ಕೆಎಸ್ ಆರ್ ಟಿಸಿ ಅಧಿಕಾರಿ ರಮ್ಯ ಅವರನ್ನು ಸಂಪರ್ಕಿಸಿ ಎಳೆಯ ಮಕ್ಕಳ ಮೇಲೆ ಮಾವೀಯತೆ ತೋರದ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.


















