ಮಂಗಳೂರು : ಉದ್ಯಮಿ ವಿವೇಕ್ ರಾಜ್ ಮನೆ ಮೇಲೆ ಐ.ಟಿ.ದಾಳಿ
ಮಂಗಳೂರಿನ ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಇಂದು ಮುಂಜಾನೆ ಕಾಂಗ್ರೆಸ್ ಮುಖಂಡ ವಿವೇಕ್ ರಾಜ್ ಪೂಜಾರಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.
ಬೆಳಗ್ಗೆ ಸುಮಾರು 7 ಗಂಟೆಗೆ ರಾಜ್ಯದ ಬೇರೆ ಬೇರೆ ಕಡೆಯ 14 ಮಂದಿ ಅಧಿಕಾರಿಗಳು ವಿವೇಕ್ ರಾಜ್ ಪೂಜಾರಿಗೆ ಸೇರಿದ ಅತ್ತಾವರ ಮತ್ತು ಮಣ್ಣಗುಡ್ಡೆಯಲ್ಲಿರುವ ಎರಡು ಮನೆಗೆ ಹಾಗೂ ವಿವೇಕನಗರದಲ್ಲಿರುವ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವೇಕ್ ರಾಜ್ ಪೂಜಾರಿ ‘ನನ್ನ ವ್ಯವಹಾರದ ದಾಖಲೆಪತ್ರಗಳೆಲ್ಲವೂ ಸಮರ್ಪಕವಾಗಿದೆ. ನಾನು ತೆರಿಗೆ ವಂಚಿಸಿ ವ್ಯವಹರಿಸುವುದಿಲ್ಲ. ಇದು ಬಿಜೆಪಿಗರ ಕುಮ್ಮಕ್ಕಿನಿಂದ ನಡೆದ ಐಟಿ ದಾಳಿಯಾಗಿದೆ. ದಾಳಿಯಲ್ಲಿ ಐಟಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪರ್ಧಿಸುವ ಚಿಕ್ಕಮಗಳೂರು ಕ್ಷೇತ್ರದಲ್ಲಿ ತನಗೆ ಕಾಂಗ್ರೆಸ್ ಹೈಕಮಾಂಡ್ ಉಸ್ತುವಾರಿಯ ಜವಾಬ್ದಾರಿ ವಹಿಸಿದೆ. ಅದರಂತೆ ತಾನು ಚಿಕ್ಕಮಗಳೂರು ಕ್ಷೇತ್ರದಾದ್ಯಂತ ಪಕ್ಷದ ಪರ ಬಿರುಸಿನ ಪ್ರಚಾರ ಮಾಡುತ್ತಿದ್ದೇನೆ. ಮನೆ ಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದ್ದೇನೆ. ಅಲ್ಲದೆ ಬಿಜೆಪಿಯ ಕಾರ್ಯಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇನೆ. ಇದರಿಂದ ಅಸಮಾಧಾನಗೊಂಡ ಬಿಜೆಪಿ ಅಭ್ಯರ್ಥಿಯು ಆದಾಯ ತೆರಿಗೆ ಇಲಾಖೆಯ ಮೇಲೆ ಒತ್ತಡ ಹೇರಿ ದಾಳಿ ಮಾಡಿಸಿದ್ದಾರೆ ಎಂದು ವಿವೇಕ್ ರಾಜ್ ಪೂಜಾರಿ ಆರೋಪಿಸಿದ್ದಾರೆ.