ದಾಖಲೆಗಳಿಲ್ಲದೆ ಸಾಗಾಟ ಮಾಡುತಿದ್ದ 55 ಪವನ್ ಚಿನ್ನ ಹಾಗೂ 4 ಲಕ್ಷ ರೂ. ವಶಕ್ಕೆ

ಮಂಜೇಶ್ವರ: ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕರ್ಣಾಟಕ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಜೇಶ್ವರ ಅಬಕಾರಿ ಇಲಾಖೆ ನಡೆಸಿದ ತಪಾಸಣೆಯಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 55 ಪವನ್ (438.77 ಗ್ರಾಂ) ಚಿನ್ನಾಭರಣ ಹಾಗೂ 4 ಲಕ್ಷ ರೂಪಾಯಿ ಹಣಗಳೊಂದಿಗೆ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಶನಿವಾರ ಸಂಜೆ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಕಾರ್ಯಾಚರಣೆ ನಡೆದಿದೆ.

ಕೋಝಿಕ್ಕೋಡ್ ನಿವಾಸಿಗಳಾದ ನಾಸರ್ ಹಾಗೂ ಈತನ ಪುತ್ರ ಮಹಮ್ಮದ್ ಫಾಸಿಲ್ ಸೆರೆಗೀಡಾಗಿದ್ದಾರೆ. ಸೆರೆಗೀಡಾದವರನ್ನು ಹಾಗೂ ವಶಪಡಿಸಲಾದ ಹಣ ಹಾಗೂ ಚಿನ್ನವನ್ನು ಜಿ ಎಸ್ ಟಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅಬಕಾರಿ ಇಲಾಖಾ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿಲ್ ಕುಮಾರ್ ಕೆ.ಕೆ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.