ಮರವೂರು ಸೇತುವೆ ದುರಸ್ತಿ ಕಾಮಗಾರಿ ಪೂರ್ಣ
ಮಂಗಳೂರು: ಕುಸಿದಿದ್ದ ಮರವೂರು ಸೇತುವೆ ದುರಸ್ತಿ ಪೂರ್ಣಗೊಂಡು ಶುಕ್ರವಾರ ಸಾಯಂಕಾಲದಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೇರ ಸಂಪರ್ಕ ಕಲ್ಪಿಸಲು ಸಹಕಾರಿಯಾಗಿದ್ದ ಮರವೂರು ಸೇತುವೆ ಒಂದುವರೆ ತಿಂಗಳ ಹಿಂದೆ ಎರಡು ಅಡಿಯಷ್ಟು ಕುಸಿದಿತ್ತು.
ಬೆಂಗಳೂರಿನಿಂದ ಬಂದ ತಜ್ಞ ಇಂಜಿನಿಯರ್‌ಗಳು ಪರಿಶೀಲಿಸಿ, ಸರಿಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು ವರದಿ ನೀಡಿದ ಬಳಿಕ ಕಾಮಗಾರಿ ಆರಂಭಿಸಲಾಗಿತ್ತು.
ಪಿಡಬ್ಲ್ಯುಡಿ ಇಲಾಖೆಯ ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಸಂಚಾರಕ್ಕೆ ಕೆಲದಿನಗಳ ಹಿಂದೆಯೇ ಸೇತುವೆಗೆ ಜ್ಯಾಕ್ ಅಳವಡಿಸಿ ಪಿಲ್ಲರನ್ನು ಗ್ರೀನ್ ಸಿಗ್ನಲ್ ಮೇಲಕ್ಕೆತ್ತಿ ಯಥಾಸ್ಥಿತಿಗೆ ತರಲಾಗಿತ್ತು.
ಅದರ ಬಳಿಕ ವಾಹನ ಸಂಚಾರ ಸುಸೂತ್ರವಾಗುವಂತೆ ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಅದು ಪೂರ್ಣಗೊಂಡಿದೆ. ಗುರುವಾರ ತಜ್ಞರ ಉಪಸ್ಥಿತಿಯಲ್ಲಿ ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ಲೋಡ್ ಹೊಂದಿದ್ದ ಟಿಪ್ಪರ್‌ಗಳನ್ನು ಸೇತುವೆ ಮೇಲೆ ಚಲಾಯಿಸಿ ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ.
ಮರವೂರು ಸೇತುವೆ ದುರಸ್ತಿ ಪೂರ್ಣ – ಜಿಲ್ಲಾಧಿಕಾರಿ
ಮರವೂರು ಸೇತುವೆ ದುರಸ್ತಿ ಪೂರ್ಣ ಗೊಂಡು ಪರೀಕ್ಷೆ ಯಶಸ್ವಿಯಾಗಿದೆ. ಶುಕ್ರವಾರ ಸಂಜೆಯಿಂದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ.


















