ಕೂರತ್ ತಂಜಳ್ ಉರೂಸ್ ಅನ್ನದಾನ… ನಿರೀಕ್ಷೆಗೂ ಮೀರಿ ಹರಿದು ಬರುತ್ತಿರುವ ಜನಸಾಗರ

ಪುತ್ತೂರು: ಖುರತುಸ್ಸಾದಾತ್ ಕೂರತ್ ತಂಜಳ್ ಉರೂಸ್ ಪ್ರಯುಕ್ತ ಜೂ.29ರಂದು ಬೆಳಿಗ್ಗೆ 10 ಗಂಟೆಯಿಂದ ಸಾರ್ವಜನಿಕ ಅನ್ನದಾನ ವಿತರಣೆ ನಡೆಯುತ್ತಿದ್ದು ರಾಜ್ಯದ ವಿವಿಧ ಕಡೆಗಳಿಂದ ಮತ್ತು ಕೇರಳದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅನ್ನದಾನ ಸ್ವೀಕರಿಸುತ್ತಿದ್ದಾರೆ.
ಬೆಳಗ್ಗಿನಿಂದಲೇ ಕೂರತ್‌ನಲ್ಲಿ ಜನರು ಕಿಕ್ಕಿರಿದು ಸೇರಿದ್ದು, ಮದ್ಯಾಹ್ನದ ವೇಳೆಯಂತೂ ಸವಣೂರುವರೆಗೂ ಟ್ರಾಫಿಕ್ ಜಾಂ ಉಂಟಾಗಿತ್ತು. ಸ್ವಯಂ ಸೇವಕರು ಮತ್ತು ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರೂ ಜನದಟ್ಟಣೆಯಿಂದ ಸುಸೂತ್ರವಾಗಿ ನಿಭಾಯಿಸುವುದು ತ್ರಾಸದಾಯಕವಾಗಿದೆ. ಅನ್ನದಾನ ಸ್ವೀಕರಿಸಲು ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಕ್ಯೂನಲ್ಲಿ ನಿಂತು ಅನ್ನದಾನ ಸ್ವೀಕರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಸಂಜೆ 6 ಗಂಟೆ ವರೆಗೂ ಅನ್ನದಾನ ವಿತರಣೆ ಎಂದು ತೀರ್ಮಾನಿಸಲಾಗಿತ್ತಾದರೂ ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬರುತ್ತಿರುವುದರಿಂದ ರಾತ್ರಿ ವರೆಗೂ ಅನ್ನದಾನ ವಿತರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮುಸ್ಲಿಮರು ಮಾತ್ರವಲ್ಲದೇ ಇತರ ಧರ್ಮಗಳ ಬಾಂಧವರು ಕೂಡಾ ಆಗಮಿಸಿ ಅನ್ನದಾನ ಸ್ವೀಕರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಒಟ್ಟಿನಲ್ಲಿ ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿದ್ದು ದರ್ಗಾ ಝಿಯಾರತ್ ನಡೆಸಿ ಬಳಿಕ ಅನ್ನದಾನ ಸ್ವೀಕರಿಸುತ್ತಿದ್ದಾರೆ. ಮದ್ಯಾಹ್ನದ ವೇಳೆಗೆ 30 ಸಾವಿರಕ್ಕೂ ಅಧಿಕ ಮಂದಿ ಅನ್ನದಾನ ಸ್ವೀಕರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಕಿಕ್ಕಿರಿದು ತುಂಬಿದ್ದ ಜನಸಂದಣಿಯಲ್ಲಿ ಉಂಟಾದ ನೂಕುನುಗ್ಗಲಿನಿಂದಾಗಿ ಹಸ್ನಾ (18) ,(19), ಮೈಮೂನಾ (36) ಸೇರಿದಂತೆ ಆರು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಮೂವರನ್ನು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯವಾಗಿ ಆರೋಗ್ಯ ಇಲಾಖೆ ತೆರೆದಿದ್ದ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.
