ಮೂಡುಬಿದಿರೆ:ಮೆಸ್ಕಾಂ ಜನ ಸಂಪಕ೯ ಸಭೆಗೆ ಸಾವ೯ಜನಿಕರಿಗೆ ಮಾಹಿತಿ ಇಲ್ಲ:ಪಾಲಡ್ಕ ಗ್ರಾಮಸಭೆಯಲ್ಲಿ ದೂರು

ಮೂಡುಬಿದಿರೆ : ಮೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿವೆ ಆದರೆ ತಾಲೂಕಿನಲ್ಲಿ ಮೆಸ್ಕಾಂ ನಡೆಸುವ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆಯೋಣವೆಂದರೆ ಸಭೆ ಯಾವಾಗ ನಡೆಯುತ್ತದೆ ಎಂಬುದರ ಬಗ್ಗೆ ಸಾವ೯ಜನಿಕರಿಗೆ ಮಾಹಿತಿಯೇ ನೀಡುವುದಿಲ್ಲ ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳನ್ನು ಪಾಲಡ್ಕ ಗ್ರಾಮಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.
ಪಂಚಾಯತ್ ಅಧ್ಯಕ್ಷೆ ಅಮಿತಾ ಅಧ್ಯಕ್ಷತೆಯಲ್ಲಿ ನಡೆದ ಮಂಗಳವಾರ ಕಡಂದಲೆಯ ಗಣೇಶ ದಶ೯ನ ಸಭಾಭವನದಲ್ಲಿ ನಡೆದ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು
ಜನ ಸಂಪಕ೯ ಸಭೆಗೆ ಎಷ್ಟು ಮಂದಿ ಬರುತ್ತಾರೆ ಎಂದು ಪ್ರಶ್ನಿಸಿದರು. ಕಳೆದ ಜನಸಂಪರ್ಕ ಸಭೆಗೆ ಕೇವಲ 20 ಮಂದಿ ಮಾತ್ರ ಬಂದಿರುವುದನ್ನು ಮೆಸ್ಕಾಂ ಅಧಿಕಾರಿ ಒಪ್ಪಿಕೊಂಡರು. ಜನ ಸಂಪರ್ಕ ಸಭೆಯ ಕುರಿತು ಮಾಹಿತಿಯನ್ನು ಗ್ರಾಮ ಪಂಚಾಯತ್ ಗೆ ನೀಡುವಂತೆ ಮೆಸ್ಕಾಂ ಇಲಾಖೆಗೆ ಪತ್ರ ಬರೆಯುವ ಕುರಿತು ನಿರ್ಣಯ ತೆಗೆದುಕೊಳ್ಳುವಂತೆ ರಾಜ್ಯ ಗ್ರಾಹಕ ಆಯೋಗದ ಸದಸ್ಯ ರಾಯಿ ರಾಜ್ ಕುಮಾರ್ ಸಲಹೆ ನೀಡಿದರು. ಈ ಕುರಿತು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮುಖ್ಯವಾಗಿ ಮೆಸ್ಕಾಂ,
ಬಲ್ಲಾಡಿ ಪ್ರದೇಶದಲ್ಲಿ ವಿದ್ಯುತ್ ತಂತಿ, ಕಂಬಗಳು ಸೂಕ್ತ ನಿರ್ವಹಣೆ ಇಲ್ಲದೆ ಅಪಾಯಕಾರಿಯಾಗುತ್ತಿದೆ. ವಿದ್ಯುತ್ ವ್ಯತ್ಯಯವು ಈ ಪ್ರದೇಶದ ಜನರನ್ನು ಕಾಡುತ್ತಿದೆ. ಈ ಕುರಿತು ಹಲವು ಬಾರಿ ಮೆಸ್ಕಾಂನವರಿಗೆ ಮಾಹಿತಿ ನೀಡಿದರೂ ಸೂಕ್ತ ಸ್ಪಂದನೆಯಿಲ್ಲ ಎಂದು ಗ್ರಾಮಸ್ಥರಾದ ಚಂದ್ರಶೇಖರ್ ಶೆಟ್ಟಿ, ಪ್ರಶಾಂತ್, ದಿವಾಕರ ತಿಳಿಸಿದರು. ಮೆಸ್ಕಾಂ ಕಚೇರಿಗೆ, ಲೈನ್‌ಮ್ಯಾನ್‌ಗಳಿಗೆ ತುರ್ತು ಸಂದರ್ಭದಲ್ಲಿ ಕರೆ ಮಾಡಿದಾಗ ಸ್ಪೀಕರಿಸುವುದಿಲ್ಲ ಎಂದು ನಿವೃತ್ತ ಶಿಕ್ಷಕ ಟಿ.ಎನ್ ಕೆಂಬಾರೆ ಸಹಿತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಹಕರ ಕರೆಗಳನ್ನು ಸ್ವೀಕರಿಸುವಂತೆ ಲೈನ್‌ಮ್ಯಾನ್‌ಗಳಿಗೆ ಹಲವಾರು ಬಾರಿ ತಿಳಿಸಿದ್ದೇವೆ. ಪಂಚಾಯತ್ ವ್ಯಾಪ್ತಿಯ ವಿದ್ಯುತ್ ಸಮಸ್ಯೆಗಳನ್ನು ಶೀಘ್ರ ಪರಿಸಲಾಗುವುದು ಎಂದು ಎಸ್‌ಒ ಮಮತಾ ತಿಳಿಸಿದರು.
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ 2024ರಲ್ಲಿ 9 ಅರ್ಜಿಗಳನ್ನು ನೀಡಿದ್ದೇವೆ. ಎಷ್ಟು ಮರಗಳನ್ನು ತೆರವುಗೊಳಿಸಿದ್ದೀರಿ?. ಒಂದು ವೇಳೆ ದುರಂತಗಳು ಸಂಭವಿಸಿದಲ್ಲಿ ಯಾರು ಹೊಣೆ ಎಂದು ಸದಸ್ಯ ರಂಜಿತ್ ಭಂಡಾರಿ ಪ್ರಶ್ನಿಸಿದರು. ರಸ್ತೆ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಭೂಮಾಲಿಕರಿಗೆ ಪರಿಹಾರಧನ ಸಿಕ್ಕಿದೆ. ಸ್ವಾಧೀನವಾದ ಬಳಿಕ ಅದು ಸರ್ಕಾರದ ಆಸ್ತಿ. ಅಲ್ಲಿರುವ ಅಪಾಯಕಾರಿ ಕಂಬ, ಮರಗಳನ್ನು ಸಂಬಂಧಪಟ್ಟ ಇಲಾಖೆ ತೆರವುಗೊಳಿಸಬೇಕು. ಯಾರ ಮುಲಾಜಿಗೂ ಒಳಗಾಗಬಾರದು ಎಂದು ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ತಿಳಿಸಿದರು. ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇವೆ ಅರಣ್ಯ ಇಲಾಖೆ ಅಧಿಕಾರಿ ಚಂದ್ರಶೇಖರ್ ಹೇಳಿದರು.
ಮನೆ ಇರುವ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಪಂಚಾಯತ್ ನಿಂದ, ಕಂದಾಯ ಇಲಾಖೆಯಿಂದ ಎನ್‌ಒಸಿ ಕೊಡುವುದು ಯಾಕೆ? ಸರಿಯಾಗಿ ಪರಿಶೀಲನೆ ನಡೆಸಿ ಅನುಮತಿ ನೀಡಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ವರ್ಣಬೆಟ್ಟು ಶಾಲೆಯ ಮೈದಾನದಲ್ಲಿ ಆಟ ಆಡಬಾರದು ಎಂದು ಪೊಲೀಸ್ ಇಲಾಖೆಯಿಂದ ಪತ್ರ ಬಂದಿದೆ. ಸ್ಥಳೀಯವಾಗಿ ಯಾವುದೇ ಮೈದಾನವಿಲ್ಲದರಿರುವುದರಿಂದ ಇಲ್ಲಿನ ಯುವಕರಿಗೆ ಆಟವಾಡಲು ಅವಕಾಶ ನೀಡಬೇಕು ಎಂದು ಗ್ರಾಮಸ್ಥ ಗಣೇಶ ಆಚಾರ್ಯ ಆಗ್ರಹಿಸಿದರು. ಶಾಲೆಯ ಮೈದಾನದಲ್ಲಿ ಬೇರೆಯವರಿಗೆ ಆಟವಾಡಲು ಅವಕಾಶ ನೀಡದಿರುವುದಕ್ಕೆ ಹಲವಾರು ಕಾರಣಗಳಿವೆ. ಸರ್ಕಾರದಿಂದಲೂ ಕಟ್ಟುನಿಟ್ಟಿನ ಸುತ್ತೋಲೆಗಳಿವೆ. ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಒಂದು ಸಮಿತಿ ರಚಿಸಿ, ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿ ಎಂದು ಸುಚರಿತ ಶೆಟ್ಟಿ ಸಲಹೆಯಿತ್ತರು.
ಪಶುಸಂಗೋಪನಾ ಇಲಾಖೆಯಲ್ಲಿ ಸಿಬಂಧಿಗಳ ಕೊರತೆ :
ಪಶುಸಂಗೋಪನೆ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ.ಮಲ್ಲಿಕಾರ್ಜುನ ಅವರು ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. 31 ಹುದ್ದೆಗಳು ಮಂಜೂರಾಗಿದ್ದರೂ ಕೇವಲ ನಾಲ್ಕು ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಇಖಾಖೆಯ ಸಮಸ್ಯೆಯನ್ನು ಗ್ರಾಮಸ್ಥರ ಮುಂದಿಟ್ಟರು.
ಉಪಾಧ್ಯಕ್ಷ ಪ್ರವೀಣ್ ಸಿಕ್ವೇರ, ಪಿಡಿಒ ರಕ್ಷಿತಾ ಡಿ., ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.