ಕೊಲ್ಯ: ನಾಪತ್ತೆಯಾಗಿದ್ದ ಅವಿವಾಹಿತನ ಮೃತದೇಹ ಬಾವಿಯಲ್ಲಿ ಪತ್ತೆ

ಉಳ್ಳಾಲ: ನಾಪತ್ತೆಯಾಗಿದ್ದ ಅವಿವಾಹಿತನ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಕುಜುಮಗದ್ದೆ ಎಂಬಲ್ಲಿ ಬೆಳಕಿಗೆ ಬಂದಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೊಲ್ಯ,ಕುಜುಮಗದ್ದೆ ನಿವಾಸಿ ಪ್ರಸಾದ್ (44) ಮೃತಪಟ್ಟವರು. ಅ.4ರಂದು ಮನೆಯಲ್ಲಿ ಮೊಬೈಲ್ ಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಮನೆ ಸುತ್ತಮುತ್ತಲೂ , ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದಾರೆ. ಕುಜುಮಗದ್ದೆ ಮನೆ ಸಮೀಪದ ಪಾಳುಬಿದ್ದ ಬಾವಿಯಲ್ಲಿ ಪ್ರಸಾದ್ ಚಪ್ಪಲಿಗಳು ದೊರೆತಿದ್ದು, ಬಾವಿಯನ್ನು ಗಮನಿಸಿದಾಗ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಮೃತದೇಹ ಮೇಲಕ್ಕೆತ್ತುವಲ್ಲಿ ಸಹಕರಿಸಿದರು. ಜೆಪ್ಪು ಗೋರ್ದಂಡು ನಿವಾಸಿ ಪ್ರಸಾದ್ ಕುಟುಂಬ ಕಳೆದ ಕೆಲ ವರ್ಷಳಿಂದ ಕುಟುಂಬ ಸಮೇತ ಕುಜುಮಗದ್ದೆಯಲ್ಲಿ ನೆಲೆಸಿದ್ದರು. ಪೈಂಟರ್ ವೃತ್ತಿ ನಿರ್ವಹಿಸುತ್ತಿದ್ದ ಅವರು ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಖಿನ್ನತೆಯಿಂದಲೇ ಆತ್ಮಹತ್ಯೆ ನಡೆಸಿರುವ ಶಂಕೆಯಿದೆ . ಮನೆಗೆ ಹಿರಿ ಮಗನಾದ ಮೃತ ಪ್ರಸಾದ್ ತಾಯಿ, ತಂದೆ, ಇಬ್ಬರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.