ಪಚ್ಚನಾಡಿಯಲ್ಲಿ ಅಭಿವೃದ್ಧಿ ಕೆಲಸ ಸಹಿಸದೆ ತೇಜೋವಧೆಗೆ ಪ್ರಯತ್ನ: ಮನಪಾ ಸದಸ್ಯೆ ಸಂಗೀತ ನಾಯಕ್ ಆರೋಪ
ಪಚ್ಚನಾಡಿ ವಾರ್ಡ್ನಲ್ಲಿ ಎಂದೆಂದೂ ನಡೆಯದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಇದನ್ನು ಸಹಿಸದೆ ಕೆಲವರು ನನ್ನ ಮತ್ತು ನನ್ನ ಪತಿಯ ವಿರುದ್ಧ ರಾಜಕೀಯ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಮನಪಾ ಸದಸ್ಯೆ ಸಂಗೀತ ನಾಯಕ್ ಆರೋಪಿಸಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಾರ್ಡ್ನಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಅಲ್ಲದೆ, ಪಾರ್ಕ್, ಅಂಗನವಾಡಿ, ಪಚ್ಚನಾಡಿ ಡಂಪಿಂಗ್ ಯಾರ್ಡ್ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ. ಇದನ್ನು ಸಹಿಸದೆ ಕಳೆದ ಕೆಲವು ವರ್ಷಗಳಿಂದ ನನ್ನ ಮತ್ತು ನನ್ನ ಪತಿಯ ವಿರುದ್ಧ ಆರೋಪಿಸಲಾಗುತ್ತಿದೆ. ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಡಿ.೧೪ರಂದು ನಡೆದ ಘಟನೆಯ ವಿಡಿಯೋದ ಸಣ್ಣ ತುಣುಕನ್ನು ಹರಿಯಬಿಟ್ಟು ಕಾರ್ಪೋರೇಟರ್ ಗಂಡನ ಹಸ್ತಕ್ಷೇಪ, ಗೂಂಡಾಗಿರಿ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದರು. ನನ್ನ ಪತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಒಂದು ವೇಳೆ ಭೂಮಾಫಿಯಾ ನಡೆದಿದ್ದರೆ ಅದನ್ನು ದಾಖಲೆ ಸಹಿತ ಬಹಿರಂಗಪಡಿಸಲಿ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಪತಿ ಯಾವತ್ತೂ ಹಸ್ತಕ್ಷೇಪ ಮಾಡಿಲ್ಲ ಎಂದು ಅವರು ಹೇಳಿದರು.

















