ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು : ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ಜಿಲ್ಲಾ ಸಮಿತಿ ಆಗ್ರಹ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಿ.ಕೆ ಹರಿಪ್ರಸಾದ್ ಅವರಿಗೆ ಶೀಘ್ರದಲ್ಲೇ ಸೂಕ್ತ ಸಚಿವ ಸ್ಥಾನ ನೀಡಬೇಕೆಂದು ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ದ.ಕ. ಜಿಲ್ಲಾ ಸಮಿತಿ ಆಗ್ರಹಿಸಿದೆ.ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಬಿ.ಕೆ ಹರಿಪ್ರಸಾದ್‍ರವರ ಪಾತ್ರವೂ ಹಿರಿದಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಯಕನಿಗೆ ಅನ್ಯಾಯವಾದರೆ ಸಮುದಾಯ ಸಹಿಸುವುದಿಲ್ಲ ಎಂದರು.
ಕಾಂಗ್ರೆಸ್‍ನಿಂದ ಆದ ಕಡೆಗಣನೆ ಬಗ್ಗೆ ಇತ್ತೀಚಿಗೆ ಹರಿಪ್ರಸಾದರ್ ಅವರು ನೀಡಿರುವ ಹೇಳಿಕೆ ಸ್ವಾಗತಾರ್ಹವಾಗಿದ್ದು, ಅವರನ್ನು ಪಕ್ಷದಲ್ಲಿ ಕಡೆಗಣಿಸಿದರೆ ಸಮುದಾಯ ಅವರ ಬೆನ್ನ ಹಿಂದೆ ನಿಂತು ಶಕ್ತಿ ತುಂಬಲು ಸಿದ್ಧವಿದೆ. ಸಮುದಾಯದ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್‍ರವರು ಬಿ.ಜನಾರ್ಧನ್ ಪೂಜಾರಿ ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪರವರು ಇದ್ದ ಹಾಗೆ. ಇವರ ಬೆಂಬಲಕ್ಕೆ ಇಡೀ ಸಮುದಾಯವು ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಾಗಿದೆ ಎಂದ ಜಿತೇಂದ್ರ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಯಾವುದೇ ಹಣ ಮಂಜೂರಾತಿಯ ಪ್ರಸ್ಥಾವನೆ ಮಾಡಿಲ್ಲ. ತಕ್ಷಣವೇ ಇದಕ್ಕೆ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಸುರೇಶ್ಚಂದ್ರ ಕೋಟ್ಯಾನ್, ಉಪಾಧ್ಯಕ್ಷರಾದ ಪ್ರೇಮನಾಥ್, ಕೋಶಾಧಿಕಾರಿ ಲೋಕನಾಥ್ ಪೂಜಾರಿ, ಮಹಿಳಾ ಕಾರ್ಯದರ್ಶಿ ಶೋಭಾ ಕೇಶವ್, ಸಂಘಟನಾ ಕಾರ್ಯದರ್ಶಿ ಸುರೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.