ರೆಮಲ್ ಎಂಬ ಮೃದು ಮರಳು ಅನಾಹುತ

ರೆಮಲ್ ಚಂಡಮಾರುತವು ಪಡುವಣ ಬಂಗಾಳದಲ್ಲಿ ಹದಿನಾರಕ್ಕೂ ಹೆಚ್ಚು ಮತ್ತು ಬಾಂಗ್ಲಾದೇಶದಲ್ಲಿ ಹದಿನೆಂಟಕ್ಕೂ ಹೆಚ್ಚು ಜನರ ಪ್ರಾಣ ಹರಣ ಮಾಡಿದೆ. ಇದೇ ವೇಳೆ ಅಮೆರಿಕ ಸಂಯುಕ್ತ ಸಂಸ್ಥಾನದ ಬಯಲು ಪ್ರದೇಶದಲ್ಲಿ ದಿಗಿಣ ಹಾಕಿದ ಸುಳಿಗಾಳಿಯು ನಾಲ್ಕು ಮಕ್ಕಳ ಸಹಿತ ಹದಿನೆಂಟಕ್ಕೂ ಹೆಚ್ಚು ಮಂದಿಯ ಜೀವವನ್ನು ಹೀರಿದೆ. ರೆಮಲ್ ಚಂಡ ಸುಂಟರ ಕುಣಿತಕ್ಕೆ ಮರಗಳುರುಳಿ, ಕಟ್ಟಡಗಳು ಜರಿದು, ಭೂಕುಸಿತ ಉಂಟಾಗಿ, ಮಾಡಿನ ತಗಡುಗಳು ತರಗೆಲೆಗಳಾಗಿ ಹಾರಿ ಎಲ್ಲೆಲ್ಲೂ ವೇಗದ ಗಾಳಿ ಮತ್ತು ಬಿರುಸಿನ ಮಳೆಗಳದ್ದೇ ದಿಮಿಕಿಟತ. ಭಾರತದಲ್ಲಿ ಎರಡು ಲಕ್ಷ ಜನರು ಬಾಧಿತರು.
ಬಾಂಗ್ಲಾದೇಶ, ಯುಎಸ್‌ಎ ಎಂದು ನೂರಿಪ್ಪತ್ತಕ್ಕೂ ಹೆಚ್ಚು ಕಿಲೋಮೀಟರ್ ವೇಗದ ಗಾಳಿ ನೂಕಿಗೆ ಒಟ್ಟಾರೆ ಐವತ್ತು ಲಕ್ಷದವರ ಬದುಕು ನೀರಿಗೆ ಬಿದ್ದಿದೆ. ಈಜಲು ಬಾರದವನನ್ನು ಈಜುಕೊಳಕ್ಕೆ ದೂಡಿದಂತಾ ಪರಿಸ್ಥಿತಿ ಅವರದು, ಕೆಲವರದು ಇನ್ನೂ ಹೀನಾಯ. ಆರಾಮವಾಗಿ ಮನೆಯಲ್ಲಿ ಆನಂದದಡುಗೆಯ ಮಾಡಿ ಉಣ್ಣುತ್ತಿದ್ದವರು ಈಗ ಪರಿಹಾರ ಕಾರ್ಯಕರ್ತರು ನೀಡುವ ಪೊಟ್ಟಣದೂಟವ ಮಾಡಿ, ಕಿರು ಬಾಟಲಿ ನೀರನ್ನು ಕುಡಿದು ಕಣ್ಕಣ್ಣು ಬಿಡುವ ಸ್ಥಿತಿ ಉಂಟಾಗಿದೆ. ಕಡಲ ಕರೆ ಮತ್ತು ತಗ್ಗು ಪ್ರದೇಶದವರ ಕತೆ ಯಾರಿಗೂ ಬೇಡ. ಪರಿಹಾರ ಶಿಬಿರಗಳಲ್ಲಿ ತಲೆಗೆ ಕೈಹೊತ್ತು ಕೂರುವುದಾಗಿದೆ.

ರೀಮಲ್ ಎನ್ನುವುದು ಅರೇಬಿಯಾದಲ್ಲಿ ಹುಡುಗಿಯರ ಹೆಸರು. ರೀಮಲ್ ಎಂದರೆ ಮೃದು ಎಂದು ಅರ್ಥ. ಸಣ್ಣ ಹುಡುಗಿ ಚಂಡಿ ಹಿಡಿದರೆ ಏನಾದೀತೋ ಅದಕ್ಕಿಂತ ಸಾವಿರಾರು ಪಟ್ಟು ಅನಾಹುತವನ್ನು ರೆಮಲ್ ಚಂಡಮಾರುತ ಮಾಡಿದೆ. ರೀಮಲ್ ಎನ್ನುವುದನ್ನು ಅರಬ್ ನಾಡಿನ ಕೆಲವೆಡೆ ರೆಮಲ್, ರೇಮಲ್ ಎಂದು ಕರೆಯುತ್ತಾರೆ. ರೆಮಲ್ ಎಂದರೆ ಹೊಯಿಗೆ, ಮರಳು ಎಂದು ಅರ್ಥ. ಮೃದು ಮರಳು ಆಗಿರಬಹುದು. ಆದರೆ ಮೃದು ಮರಳನ್ನು ವೇಗವಾಗಿ ಎಸೆದರೆ ಅದು ಹಾನಿಯುಂಟು ಮಾಡುತ್ತದೆ. ಮರಳು ಎಂಬ ಅರ್ಥದ ಈ ಚಂಡಮಾರುತದ ಹೆಸರನ್ನು ನೀಡಿರುವುದು ಓಮನ್ ದೇಶ. ಭಾರತದಲ್ಲಿ ರೀಮಾ ಎಂಬ ಹೆಸರಿದೆ. ಬಡಗಣ ಭಾರತದಲ್ಲಿ ಇದಕ್ಕೆ ಅರ್ಥ ಬಿಳಿ ಜಿಂಕೆ, ಬಿಳಿ ಮರಳು ಜಿಂಕೆ ಎಂದರೂ ತೊಂದರೆ ಇಲ್ಲ ಬಿಡಿ.
ಓಮನ್ ಮತ್ತು ಅರಬ್ ದೇಶಗಳಲ್ಲೂ ಇತ್ತೀಚೆಗೆ ಭಾರೀ ಮಳೆ ಗಾಳಿ ನೆರೆ ಬರತೊಡಗಿದೆ. ಅರಬ್ ಅಮೀರರ ಒಕ್ಕೂಟ ಅಲ್ಲದೆ ಅಫಘಾನಿಸ್ತಾನಗಳು ಇತ್ತೀಚೆಗೆ ಭಯಂಕರ ಮಳೆ ಪ್ರವಾಹಕ್ಕೆ ಒಳಗಾದವು. ವಾಹನಗಳು ರಸ್ತೆಗಳಲ್ಲಿ ನೀರಿನಲ್ಲಿ ಈಜಾಡಿದವು, ಕೆಲವು ತೇಲಿ ಹೋಗಿ ಕಡಲು ಸೇರಿದವು. ದುಬಾಯಿಯವರಂತೂ ಹೀಗೆ ಗಾಳಿ ಮಳೆಯಾದರೆ ಗಗನಚುಂಬಿಯೇ ಸರಿ, ಬೇರೆ ಕಟ್ಟಡಗಳೆಲ್ಲ ವರಿ ಎನ್ನತೊಡಗಿದರು. ಆದರೆ ಸೈಕ್ಲೋನ್‌ಗಳು ಮಳೆಯೊಡನೆ ಬರಬರನೆ ಗಾಳಿ ಕುಣಿಸುವುದರಿಂದ ಗಗನಚುಂಬಿಗಳು ಮಣಿಯತೊಡಗಿದರೆ ಏನು ಮಾಡುವುದು? ಇನ್ನು ಮುಂದೆ ಆಲೋಚಿಸಬೇಕಾದ ವಿಷಯ. ಭೂಬಿಸಿಯಿಂದ ಧ್ರುವÀ ಮಂಜು ಕರಗಿ ಕಡಲು ಸೇರಿ, ತಟದ ನಗರಗಳನ್ನು ನುಂಗುವ ಅಪಾಯ ಇದೆ. ಈ ಎಚ್ಚರಿಕೆ ನೀಡಿ ದಶಕವೇ ಕಳೆಯಿತು. ಮುಳುಗಪ್ಪ ಭಯದಲ್ಲಿರುವವುಗಳಲ್ಲಿ ದುಬಾಯಿಯೂ ಇದೆ; ಮುಂಬಯಿಯೂ ಇದೆ.

ಆದರೆ ಶಾಂತಸಾಗರ, ಹಿಂದೂಮಹಾಸಾಗರ ಇಲ್ಲವೇ ನಮಗೆ ಸಂಬAಧಿಸಿದAತೆ ಬಂಗಾಳಕೊಲ್ಲಿಯಷ್ಟು ಸೈಕ್ಲೋನ್ ಎಬ್ಬಿಸುವ ಕಡಲಲ್ಲ ಅರಬ್ಬಿ ಸಮುದ್ರ. ಆದರೆ ಆಗಾಗ ಕೀಟಲೆ ಮಾಡುವುದು ಅದಕ್ಕೂ ಗೊತ್ತಿದೆ. 1953ರಿಂದ ರಾಷ್ಟಿçÃಯ ಹರಿಕೇನ್ ಸೆಂಟರ್ ಮಾಡಿರುವ ಪಟ್ಟಿಯಂತೆ ಚಂಡಮಾರುತಗಳಿಗೆ ದೇಶಗಳು ಸರತಿಯಲ್ಲಿ ಹೆಸರು ನೀಡುತ್ತವೆ. ವಿಶ್ವ ಹವಾಮಾನ ಒಕ್ಕೂಟವು ಇದಕ್ಕೆ ಒಂದು ಅಂತರರಾಷ್ಟಿçÃಯ ಸಮಿತಿಯನ್ನು ರಚಿಸಿಕೊಂಡಿದೆ. ವಿಚಿತ್ರವೆಂದರೆ ಇದಕ್ಕೆ ಬಹುತೇಕ ಹೆಣ್ಣುಮಕ್ಕಳ ಹೆಸರನ್ನೇ ಇಡಲಾಗುತ್ತಿದೆ. ಬಹುತೇಕ ಹೆಸರು ಇಡುವವರು ಗಂಡಸರೇ ತಾನೆ!
ಎಲ್ಲೋ ಕೆಲವೊಮ್ಮೆ ಬೇರೆ ಹೆಸರು ಇಡಲಾಗುತ್ತದೆ. ಉಷ್ಣವಲಯದ ಕಡೆಯಿಂದ ಅರಬ್ಬಿ ಸಮುದ್ರದಿಂದ ನುಗ್ಗಿದ ಅಪಾರ ಹಾನಿ ಮಾಡಿದ 2021ರ ಚಂಡಮಾರುತವು ಗುಜರಾತನ್ನು ಹಿಂಡಿ ಬಿಟ್ಟಿತ್ತು. ಇದಕ್ಕೆ ಗೆಹ್‌ಕೋ. ಮ್ಯಾನ್ಮಾರ್ ಈ ಹೆಸರನ್ನು ಇಟ್ಟಿತ್ತು. ಬರ್ಮೀ ಭಾಷೆಯಲ್ಲಿ ಅದಕ್ಕೆ ಅರ್ಥ ಹಲ್ಲಿ. ರೆಮಲ್ ಚಂಡಮಾರುತವು ಸಾಗರ್ ದ್ವೀಪದ ಕಡೆಯಿಂದ ಬಹುವಾಗಿ ಬಾಂಗ್ಲಾದೇಶವನ್ನು ಬಾಧಿಸಿದೆ. ಆದರೆ ಪಶ್ಚಿಮ ಬಂಗಾಳ ಮತ್ತು ಕೊಲ್ಕತ್ತಾವನ್ನೂ ಬಾಧಿಸಿದೆ. ಈ ಕೊಲ್ಕತ್ತಾಕ್ಕೂ ಚಂಡಮಾರುತದ ತಂದೆಗೂ ಸಂಬoಧವಿದೆ. ಸೈಕ್ಲೋನ್ ಪಿತನೇ ಎಂದು ಆಶ್ಚರ್ಯ ಬೀಳಬೇಡಿ.

1835-1855ರ ನಡುವೆ ಹೆನ್ರಿ ಪಿಡಿಂಗ್ಟನ್‌ರು ಉಷ್ಣವಲಯದ ಚಂಡಮಾರುತಗಳ ಬಗೆಗೆ 40ಕ್ಕೂ ಹೆಚ್ಚು ಸಂಶೋಧÀನ ಪ್ರಬಂಧಗಳನ್ನು ಕೊಲ್ಕತ್ತಾದಲ್ಲಿದ್ದು ಬರೆದಿದ್ದಾರೆ. ದ ಜರ್ನಲ್ ಆಫ್ ದ ಏಶಿಯಾಟಿಕ್ ಸೊಸೈಟಿಯಲ್ಲಿ ಅವೆಲ್ಲ ಪ್ರಕಟವಾಗಿವೆ. ಸೈಕ್ಲೋನ್ ಎಂಬ ಶಬ್ದವನ್ನು ಕೂಡ ನೀಡಿದ್ದು ಇದೇ ಹೆನ್ರಿ ಪಿಡಿಂಗ್ಟನ್. ಸ್ನೇಕ್ ಕಾಯಿಲ್, ಉಚ್ಚಿದ ತೆರಿಯ, ಹಾವಿನ ಸುರುಳಿಯ ಅರ್ಥದಲ್ಲಿ ಈ ಸೈಕ್ಲೋನ್ ಶಬ್ದವು ಬಳಕೆಗೆ ಬಂದಿದೆ. ಅವರು ಚಂಡಮಾರುತಗಳ ನಿಯಮ, ಕಟ್ಟಳೆ, ಕಾನೂನುಗಳನ್ನೂ ರೂಪಿಸಿದ್ದಾರೆ. ವಿಜ್ಞಾನದ ವಲಯದಲ್ಲಿ ಅವರಿಗೆ ಫಾದರ್ ಆಫ್ ದ ಸೈಕ್ಲೋನ್ ಎಂದೇ ಹೆಸರು.
ಫಾದರ್ ಆಫ್ ಸೈಕ್ಲೋನ್ ಇರುವಂತೆಯೇ ಭಾರತೀಯ ಚಂಡಮಾರುತಗಳ ತಂದೆ ಸಹ ಒಬ್ಬರು ಇದ್ದಾರೆ. ಮೃತ್ಯುಂಜಯ ಮಹಾಪಾತ್ರರನ್ನು ಭಾರತದ ಸೈಕ್ಲೋನ್ ಮಾನವ ಎಂದು ಕರೆಯಲಾಗುತ್ತದೆ. ಪೈಲಿನ್, ಹುದ್‌ಹುದ್, ತಿತ್ಲಿ, ಫನಿ, ಆಂಫನ್ ಮೊದಲಾದ ಚಂಡಮಾರುತಗಳ ಪಥಗಳನ್ನು ಸರಿಯಾಗಿ ಗುರುತಿಸಿದ ಕೀರ್ತಿ ಮೃತ್ಯುಂಜಯರಿಗೆ ಸಲ್ಲುತ್ತದೆ. ಹೀಗೆ ಸರಿಯಾದ ದಾರಿ ತಿಳಿದಾಗ ಅಲ್ಲಿ ಕ್ರಮಪ್ರಕಾರವಾಗಿ ಪರಿಹಾರ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ.
ಕೊಲ್ಕತ್ತಾದ ಮೇಲೆ ರೆಮಲ್ ಚಂಡಮಾರುತವು 135 ಕಿಲೋಮೀಟರ್ ವೇಗದ ಗಾಳಿಯೊಡನೆ ಅಪ್ಪಳಿಸಿ ಮಡಕೆಸುರಿ ಮಳೆಯನ್ನು ಸುರಿಸಿತು. ಬಾಂಗ್ಲಾದೇಶದ ಕೆಲವು ಕಡೆ 140 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಯು ಬಾಗದ್ದವನ್ನೆಲ್ಲ ಬಾಗಿಸಿದೆ. ಇಂಗ್ಲಿಷ್‌ನಲ್ಲಿ ಸೈಕ್ಲೋನ್, ಟೈಫೂನ್, ಹರಿಕೇನ್ ಎಂದಿತ್ಯಾದಿಯಾಗಿ ಈ ಕುಣಿ ಸುಳಿ ಗಾಳಿಯ ಹೊಡೆತಗಳನ್ನು ಕರೆಯಲಾಗಿದೆ. ವಿಸ್ತಾರವಾದ ಕಡಲಿನಲ್ಲಿ ಒಂದು ಕಡೆ ಗಾಳಿಯು ವಿರಳವಾದಾಗ ಇತರೆಡೆಯ ಗಾಳಿಯು ವೇಗವಾಗಿ ಅಲ್ಲಿಗೆ ನುಗ್ಗುತ್ತದೆ. ಇವು ಸುಂಟರಗಾಳಿಯಾಗಿ ಕಡಲ ಅಲೆಗಳನ್ನು ಭೀಕರವಾಗುವಂತೆ ಮಾಡುತ್ತದೆ.
ಬರಹ: ಪೇರೂರು ಜಾರು, ಹಿರಿಯ ಸಂಪಾದಕರು
