ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ನ.12ರಂದು ಜನಾಗ್ರಹ ಸಭೆ
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ನ.12ರಂದು ಜನಾಗ್ರಹ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲಾಧ್ಯಕ್ಷ ಲಾರೆನ್ಸ್ ಡಿಸೋಜ ಹೇಳಿದರು.
ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಅಂದು ಅಪರಾಹ್ನ 3 ಗಂಟೆಗೆ ನಗರದ ಕೂಳೂರಿನ ಕೆಐಒಸಿಎಲ್ ಮುಂಭಾಗದಲ್ಲಿ ಈ ಜನಾಗ್ರಹ ಸಭೆ ನಡೆಯಲಿದೆ ಎಂದರು.ಘಟಕದ ರಾಜ್ಯಾಧ್ಯಕ್ಷ ಪುಟ್ಟೆಸ್ವಾಮಿ ಗೌಡ, ಕೆಪಿಸಿಸಿ ಉಪಾಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ಹುಸಿಯಾಗಿದೆ. ಪ್ರಸಕ್ತ ಉದ್ಯೋಗ ಸೃಷ್ಟಿಯ ಬದಲು ಉದ್ಯೋಗ ನಷ್ಟವಾಗುತ್ತಿದೆ ಎಂದರು.ಕಾರ್ಮಿಕ ಕಲ್ಯಾಣ ನಿಧಿಯ ಪ್ರಯೋಜನ ಅಸಂಘಟಿತ ವಲಯದ ಕಾರ್ಮಿಕರಿಗೂ ಲಭಿಸುವಂತೆ ಇದಕ್ಕೆ ತಿದ್ದುಪಡಿ ತರಬೇಕು ಎಂದವರು ಆಗ್ರಹಿಸಿದರು.

ಮುಖಂಡರಾದ ಸಲೀಂ,ವಿಶ್ವಾಸ್ದಾಸ್ ಕುಮಾರ್, ಸುರೇಂದ್ರ ಕಂಬಳಿ, ನೀರಜ್ ಪಾಲ್,ಉಮೇಶ್ ದಂಡಕೇರಿ, ಕಾರ್ಪೊರೇಟರ್ ಅನಿಲ್ ಕುಮಾರ್,ವಹಾಬ್ ಕುದ್ರೋಳಿ, ಜಯರಾಜ ಕೋಟ್ಯಾನ್, ಸುನೀಲ್, ನಜೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.


















